ADVERTISEMENT

ಜಮಖಂಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹ

ಸರ್ಕಾರದ ಮೇಲೆ ಒತ್ತಡ ತರಲು ಜಾಥಾ ಹಮ್ಮಿಕೊಳ್ಳಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 16:44 IST
Last Updated 29 ಡಿಸೆಂಬರ್ 2020, 16:44 IST
ಬನಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಿದ್ಧರಾಜ ಪೂಜಾರಿ ಮಾತನಾಡಿದರು
ಬನಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಿದ್ಧರಾಜ ಪೂಜಾರಿ ಮಾತನಾಡಿದರು   

ರಬಕವಿ ಬನಹಟ್ಟಿ: ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಲು 1997ರಲ್ಲಿ ಹೋರಾಟ ಬಲವಾಗಿತ್ತು. ವಿಜಯಪುರದಿಂದ ಬೇರ್ಪಟ್ಟ ನಂತರ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಯಿತು. ಅಂದಿನಿಂದಲೇ ಜಮಖಂಡಿಯನ್ನು ಸಹ ಜಿಲ್ಲಾ ಕೇಂದ್ರವನ್ನಾಗಿಸಿ ಎಂಬ ಕೂಗು ಆರಂಭವಾಯಿತು ಎಂದು ರಬಕವಿ ಬನಹಟ್ಟಿ ತಾಲ್ಲೂಕು ನಿರ್ಮಾಣ ಸಮಿತಿಯ ಮಾಜಿ ಅಧ್ಯಕ್ಷ ಭೀಮಶಿ ಮಗದುಮ್‍ ತಿಳಿಸಿದರು.

ಅವರು ಸ್ಥಳೀಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ವಕೀಲ ಡಾ.ಟಿ.ಪಿ.ಬಾಂಗಿ, ಓಲೇಮಠದ ಡಾ. ಚಂದ್ರಶೇಖರ ಸ್ವಾಮೀಜಿ, ಅಂದಿನ ರಾಜಕೀಯ ಪ್ರಮುಖರಾದ ದಿ.ರಾಮಣ್ಣ ಕಲೂತಿ, ಸಿದ್ದು ಸವದಿ, ಸಿದ್ದು ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಜಿ.ಎಸ್‍.ನ್ಯಾಮಗೌಡರು ಕೂಡಾ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದರು. ಈಗ ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸುವ ಹೋರಾಟಕ್ಕೆ ನಾವು ಮತ್ತೊಮ್ಮೆ ಸಜ್ಜಾಗಬೇಕಾಗಿದೆ ಎಂದು ಮಗದುಮ್‍ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಕೇವಲ ಮನವಿ ಪತ್ರಗಳನ್ನು ನೀಡುವುದರಿಂದ ಮಾತ್ರ ಬೇಡಿಕೆಗಳು ಈಡೇರಲಾರವು. ಹೊಸ ಜಿಲ್ಲೆಯ ನಿರ್ಮಾಣಕ್ಕೆ ರಾಜಕೀಯ ಇಚ್ಛಾ ಶಕ್ತಿ ಕೂಡಾ ಮುಖ್ಯವಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಮೇಲೂ ಒತ್ತಡ ಹಾಕಬೇಕು. ಅದಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗಬೇಕು ಎಂದು ತಿಳಿಸಿದರು.

ADVERTISEMENT

ಮುಖಂಡ ಶಂಕರ ಸೋರಗಾವಿ ಮಾತನಾಡಿ, ಜಮಖಂಡಿಯನ್ನು ಜಿಲ್ಲಾ ಕೇಂದ್ರ ನಿರ್ಮಾಣಕ್ಕಾಗಿ ಸರ್ಕಾರದ ಗಮನ ಸೆಳೆಯಲು ಮಹಾಲಿಂಗಪುರ, ತೇರದಾಳ, ರಬಕವಿ ಮತ್ತು ಬನಹಟ್ಟಿಯಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಜಾಥಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ತೇರದಾಳ ತಾಲ್ಲೂಕು ನಿರ್ಮಾಣ ಸಮಿತಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿ, ಈ ಭಾಗದ ಜನರು ಪ್ರತಿನಿತ್ಯ ತಮ್ಮ ಕೆಲಸಗಳಿಗಾಗಿ ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ. ಇದರಿಂದ ಇಲ್ಲಿಯ ಜನರಿಗೆ ಬಹಳಷ್ಟು ಅನಾನುಕೂಲವಾಗಿದೆ. ಆದ್ದರಿಂದ ಜಮಖಂಡಿ ಜಿಲ್ಲೆಯಾದರೆ ಈ ಭಾಗಕ್ಕೆ ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಪ್ರೊ. ಬಸವರಾಜ ಕೊಣ್ಣೂರ, ಪ್ರೊ.ಜಿ.ಎಸ್.ವಡಗಾವಿ, ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ, ಪ್ರೊ. ಎಂ.ಎಸ್‍.ಬದಾಮಿ, ಡಾ.ಎಂ.ಎಸ್‍. ದಾನಿಗೊಂಡ, ರಾಮಣ್ಣ ಹುಲಕುಂದ, ಮನೋಹರ ಶಿರೋಳ ಮಾತನಾಡಿದರು.

ಸಭೆಯಲ್ಲಿ ಸಿದ್ದನಗೌಡ ಪಾಟೀಲ, ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಮಲ್ಲಣ್ಣ ಕಕಮರಿ, ಸುರೇಶ ಚಿಂಡಕ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ಬಸವರಾಜ ತೆಗ್ಗಿ, ನೀಲಕಂಠ ಮುತ್ತೂರ,ಮಲ್ಲಿಕಾರ್ಜುನ ಬಾಣಕಾರ, ಬಸವರಾಜ ದಲಾಲ, ಈಶ್ವರ ನಾಗರಾಳ, ಸಂಜಯ ತೆಗ್ಗಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.