ADVERTISEMENT

ಬಾಗಲಕೋಟೆ | ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ರಾಜ್ಯ ಕುರಿಗಾಹಿಗಳ ಹಿತರಕ್ಷಣಾ ಸಮಿತಿಯಿಂದ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:23 IST
Last Updated 16 ಏಪ್ರಿಲ್ 2025, 16:23 IST

ಬಾಗಲಕೋಟೆ: ಕುರಿಗಾಹಿಗಳ ರಕ್ಷಣೆಗೆ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರಿಗಾಹಿಗಳ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ವಿಧಾನಮಂಡಲದಲ್ಲಿ ಹೇಳಿದ್ದರು. ಆದರೆ, ಈಗ ಅದನ್ನು ಜಾರಿಗೊಳಿಸುತ್ತಿಲ್ಲ. ಜಾರಿ ಮಾಡಿದಿದ್ದರೆ ಹೊರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುರಿ ಕಾಯಿಸಲು ಕಾಡು ಪ್ರದೇಶದಲ್ಲಿ, ಹೊಲಗಳಲ್ಲಿ ವಾಸ್ತವ್ಯ ಮಾಡುವುದರಿಂದ ಅಪಾಯ ಹೆಚ್ಚಿರುತ್ತದೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಕುರಿಗಳ ಕಳ್ಳತನ, ಅವರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳಾಗುತ್ತಿರುವುದರಿಂದ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

‘ಕುರಿ ಕಾಯುವ ಕಾರ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲ ಜನಾಂಗದವರೂ ಮಾಡುತ್ತಿದ್ದಾರೆ. ಅವರ ರಕ್ಷಣೆ ಕಾರ್ಯ ಆಗಬೇಕು’ ಎಂದರು.

ಮುಖಂಡ ಕಾಶಿನಾಥ ಹುಡೇದ ಮಾತನಾಡಿ, ಅರಣ್ಯ ಇಲಾಖೆಯಿಂದ ಕುರಿಗಾಹಿಗಳಿಗೆ ತೊಂದರೆ ಇದೆ. ಕುರಿಗಳನ್ನು ಮೇಯಿಸಲು ಜಾಗ ಒದಗಿಸುವ ವ್ಯವಸ್ಥೆ ಆಗಬೇಕು. ಇಲಾಖೆಯಿಂದ ಆಗುವ ತೊಂದರೆಯನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಿರುವುದು ಒಳ್ಳೆಯದು. ಉಳಿದ ಜಿಲ್ಲೆಗಳಲ್ಲಿಯೂ ಇಂತಹ ತರಬೇತಿಯನ್ನು ನೀಡಬೇಕು. ಅವರಿಗೆ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದರು.

ಮುಖಂಡರಾದ ಪರಶುರಾಮ ಮಂಟೂರ, ಬಸವರಾಜ ಧರ್ಮಟ್ಟಿ, ಈರಪ್ಪ ಹಂಚಿನಾಳ, ಯಲ್ಲಪ್ಪ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.