ADVERTISEMENT

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಒತ್ತಾಯ

ರಬಕವಿ ಬನಹಟ್ಟಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:04 IST
Last Updated 9 ಜುಲೈ 2025, 4:04 IST
ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಆಗ್ರಹಿಸಿ ರಬಕವಿ–ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಆಶಾ ಕಾರ್ಯಕರ್ತೆಯರು  ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು
ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಆಗ್ರಹಿಸಿ ರಬಕವಿ–ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಆಶಾ ಕಾರ್ಯಕರ್ತೆಯರು  ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು   

ರಬಕವಿ ಬನಹಟ್ಟಿ: ‘ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಂದಾಜು 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಸರಿಯಾಗಿ ಗೌರವಧನ ಬಂದಿಲ್ಲ. ಸರ್ಕಾರ ಆದಷ್ಟು ಬೇಗ ಗೌರವ ಧನ ಬಿಡುಗಡೆ ಮಾಡಬೇಕು’ ಎಂದು ರಬಕವಿ ಬನಹಟ್ಟಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಂಜುಳಾ ಸರಿಕರ ಒತ್ತಾಯಿಸಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘ ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ 1ರಿಂದ ₹10 ಸಾವಿರ ಗೌರವಧನ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಹೆಚ್ಚುವರಿ ಗೌರವಧನ ಬಂದಿಲ್ಲ’ ಎಂದರು.

ADVERTISEMENT

‘60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಯಾವುದೇ ರೀತಿಯ ಪರಿಹಾರ ನೀಡದೆ ತೆಗೆದುಹಾಕಲಾಗುತ್ತಿದೆ. ಬಹಳಷ್ಟು ಆಶಾ ಕಾರ್ಯಕರ್ತೆಯರು 17 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನೋವು ತೋಡಿಕೊಂಡರು.

ನಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಆದಷ್ಟು ಬೇಗನೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಮಂಜುಳಾ ಸರಿಕರ ಎಚ್ಚರಿಕೆ ನೀಡಿದರು.

ಗಾಯತ್ರಿ ರಾವಳ, ಬೇಬಿಶ್ರೀ ಹಾಸೀಲಕರ, ಲಕ್ಷ್ಮಿ ತಳವಾರ, ಸಕ್ಕು ಪೂಜಾರಿ, ಗೀತಾ ಆರಗಿ, ಯಲ್ಲವ್ವ ಉಂಕಿ, ಸುಗಂಧ ಧರೆನ್ನವರ, ಪಾರ್ವತಿ ಹಿರೇಮಠ ಸೇರಿದಂತೆ ಅನೇಕರು ಇದ್ದರು.

₹5 ಲಕ್ಷ ಇಡುಗಂಟು ನೀಡಲು ಆಗ್ರಹ

‘ಆಶಾ ಕಾರ್ಯಕರ್ತೆಯರ ಸೇವೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದ್ದು ಇದನ್ನು ನಮ್ಮ ಸಂಘವು ವಿರೋಧಿಸುತ್ತದೆ. ಮೌಲ್ಯಮಾಪನವು ಸರಿಯಾಗಿ ನಿರ್ವಹಣೆಯಾಗದೆ ಬಹಳಷ್ಟು ಆಶಾ ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ನಿವೃತ್ತಿಯಾದ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡುವಂತೆ ₹5 ಲಕ್ಷ ಇಡುಗಂಟನ್ನು ರಾಜ್ಯ ಸರ್ಕಾರವೂ ನೀಡಬೇಕು’ ಎಂದು ರಬಕವಿ ಬನಹಟ್ಟಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಂಜುಳಾ ಸರಿಕರ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.