ADVERTISEMENT

ಅಭಿವೃದ್ಧಿ ಕಾರ್ಯಗಳಿಗೆ 2 ತಿಂಗಳ ಗಡುವು: ಜೆ.ಟಿ. ಪಾಟೀಲ 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:22 IST
Last Updated 17 ಜುಲೈ 2025, 5:22 IST
ಬಾಗಲಕೋಟೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು
ಬಾಗಲಕೋಟೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು   

ಬಾಗಲಕೋಟೆ: ಬೀಳಗಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಬರುವ ಎರಡು ತಿಂಗಳಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿ ಹೊಂದಬೇಕು ಎಂದು ಶಾಸಕ ಜೆ.ಟಿ. ಪಾಟೀಲ ಅಧಿಕಾರಿಗಳಿಗೆ ಗಡುವು ನೀಡಿದರು.  

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮ ಮಟ್ಟದಲ್ಲಿ ಮೂಲ ಸೌಲಭ್ಯಗಳಾದ ಚರಂಡಿ ಕಾಮಗಾರಿ, ಶುದ್ಧ ಕುಡಿಯುವ ನೀರು ಸೇರಿದಂತೆ ಇತರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ಸಹ ನೀಡುತ್ತಿಲ್ಲ. ಅಧಿಕಾರಿಗಳು ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ನಿಮ್ಮ ಮೇಲೆ ಸರ್ಕಾರಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಬಾದಾಮಿ ತಾಲ್ಲೂಕಿನ ಫಕೀರ ಬೂದಿಹಾಳ ಹಾಗೂ ಅನಗವಾಡಿ ಪಂಚಾಯತಿ ಅಬಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪ್ರತಿ ಗ್ರಾಮಕ್ಕೆ ವಾರಕ್ಕೆ ಒಂದು ಬಾರಿಯಾದರೂ ಭೇಟಿ ನೀಡಿ ಅವರ ಕಾರ್ಯವೈಖರಿ ಪರಿಶೀಲಿಸಬೇಕು. ಗ್ರಾಮದ ಜನರ ಜೊತೆಗೆ ಮುಕ್ತವಾಗಿ ಚರ್ಚೆ ಮಾಡಿ ಗ್ರಾಮದ ಸಮಸ್ಯೆಗಳ ಪರಿಹರಿಸುವ ಕಾರ್ಯ ಆಗಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಕುಡಿಯುವ ನೀರು, ಶೌಚಾಲಯಗಳ ಕುಂದು ಕೊರತೆಗಳು ನಮ್ಮ ಗಮನಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ದುರಸ್ತಿ, ಅಂಗನವಾಡಿ ಕಟ್ಟಡ ಹಾಗೂ ಸ್ಮಶಾನದ ಚಿತಾಗಾರ ದುರಸ್ತಿ ಕಾರ್ಯ ಇದ್ದಲ್ಲಿ ಕೂಡಲೇ ಸರಿಪಡಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ನರೇಗಾದಡಿ ಕೈಗೊಂಡ ಹಳೆಯ ಕಾಮಗಾರಿಗಳನ್ನು ಎರಡು ದಿನಗಳಲ್ಲಿ ಪಟ್ಟಿ ಮಾಡಬೇಕು. ಆನ್‍ಲೈನ್‍ನಲ್ಲಿ ಅನುಮೋದನೆಗ ನೀಡಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಭಾಷ ಸಂಪಗಾವಿ, ಶ್ರೀನಿವಾಸ ಪಾಟೀಲ, ಸತೀಶ ಮಾಕೊಂಡ ಉಪಸ್ಥಿತರಿದ್ದರು.  

ಬಹುಮಾನ ಪಡೆಯದ ಅಧಿಕಾರಿಗಳು

ಬಾಗಲಕೋಟೆ: ಗ್ರಾಮ ಪಂಚಾಯಿತಿ ವತಿಯಿಂದ ಕನಿಷ್ಠ 100 ರೈತರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಿದಲ್ಲಿ ₹10 ಸಾವಿರ ಬಹುಮಾನ ಘೋಷಿಸಿದ್ದೆ. ಆ ಬಹುಮಾನ ಪಡೆಯಲು ಯಾರಿಗೂ ಆಗದಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.  ಅರಣ್ಯ ಇಲಾಖೆಯಿಂದ ಸರಿಯಾದ ಕೆಲಸ ನಡೆಯುತ್ತಿಲ್ಲ. ನೆಟ್ಟ ಸಸಿಗಳು ಕಾಣುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಹಸರೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.