ADVERTISEMENT

ಧರ್ಮಸ್ಥಳ ಯೋಜನೆಯಿಂದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ: ಸಿದ್ಧಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:40 IST
Last Updated 3 ಜನವರಿ 2026, 4:40 IST
ಶಿರೂರಿನಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಿದ್ಧಲಿಂಗ ಶ್ರೀ, ಚೆನ್ನಕೇಶವ ಉದ್ಘಾಟಿಸಿದರು
ಶಿರೂರಿನಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಿದ್ಧಲಿಂಗ ಶ್ರೀ, ಚೆನ್ನಕೇಶವ ಉದ್ಘಾಟಿಸಿದರು   

ಶಿರೂರ (ರಾಂಪುರ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ನಾಡಿನ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡುತ್ತಿದೆ ಎಂದು ಶಿವಯೋಗಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಾಗಲಕೋಟೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಿರೂರ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸ್ಥಳೀಯ ಸಿದ್ದೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜರುಗಿದ ಸಹಸ್ರ ಬಿಲ್ವಾರ್ಚನೆ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪರೋಪಕಾರಿ ಕೆಲಸ ಮಾಡಿ ಬಡವರಿಗೂ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಧರ್ಮಸ್ಥಳ ಸಂಸ್ಥೆ ಸದುದ್ದೇಶದ ಭಾವನೆಯಿಂದ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುತ್ತಿದೆ. ಅದನ್ನು ಒಳ್ಳೆಯದಕ್ಕೆ ಬಳಸಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು’ ಎಂದು ಶ್ರೀಗಳು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಾಗಲಕೋಟೆ ಜಿಲ್ಲಾ ನಿರ್ದೇಶಕ ಚೆನ್ನಕೇಶವ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಧಾರ್ಮಿಕತೆಗೆ ಒತ್ತು ನೀಡದೇ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವ ಸಹಾಯ ಗುಂಪು ರಚನೆಯ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟು ಕುಟುಂಬದ ಜವಾಬ್ದಾರಿ ನಿಭಾಯಿಸುವ ಶಕ್ತಿ ನೀಡಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಗೌಡ ಗೌಡರ ಮಾತನಾಡಿದರು. ದಯಾಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೀಲಮ್ಮ ಚಿತ್ತರಗಿ ಅಧ್ಯಕ್ಷತೆ ವಹಿಸಿದ್ದರು. ರಂಗಪ್ಪ ಮಳ್ಳಿ, ಕಲ್ಲಪ್ಪ ಭಗವತಿ, ನಾಗೇಶ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಜ್ಯೋತಿ ಗುಲಗಂಜಿ, ಶೋಭಾ ಅಂಬಲಿ, ಸಿದ್ದಪ್ಪ ಹಳ್ಳೂರ ಅತಿಥಿಗಳಾಗಿದ್ದರು.

ಸೇವಾ ಪ್ರತಿನಿಧಿ ಬಸಮ್ಮ ಖಾನಾಪುರ, ಮಹಿಳಾ ಒಕ್ಕೂಟದ ವಲಯ ಮೇಲ್ವಿಚಾರಕಿ ಸವಿತಾ ವಡ್ಡರ, ಕ್ಷೇತ್ರ ಯೋಜನಾಧಿಕಾರಿ ಬಸವರಾಜ ಅಂಗಡಿ ಇದ್ದರು. ಧಾರ್ಮಿಕ ಸಭೆಗೂ ಮುನ್ನ ಬೆಳಿಗ್ಗೆ ಶಿವನಿಗೆ ಬಿಲ್ವಾರ್ಚನೆ ಸಮರ್ಪಿಸುವ ಪೂಜಾ ಕಾರ್ಯಕ್ರಮದಲ್ಲಿ ಮಲ್ಲಾಪುರ, ಶಿರೂರ ಹಾಗೂ ನೀಲಾನಗರ ಗ್ರಾಮಗಳ ಸ್ವಸಹಾಯ ಸಂಘಗಳ 101 ಸದಸ್ಯರು ಪಾಲ್ಗೊಂಡಿದ್ದರು. ಪೂಜೆಯ ನಂತರ ಮಹಾ ಮಂಗಳಾರತಿ, ಮಹಾ ಪ್ರಸಾದ ಸೇವೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.