ADVERTISEMENT

ಬಾಗಲಕೋಟೆ | ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಕೆಶಿ ವಿರುದ್ಧ ಪ್ರತಿಭಟನೆ

ಅವಹೇಳನಕಾರಿ ಹೇಳಿಕೆ; ಕ್ಷಮೆ ಕೇಳಲು ವಕೀಲರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:03 IST
Last Updated 10 ಸೆಪ್ಟೆಂಬರ್ 2025, 4:03 IST
ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ಮಾಡಿದರು
ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ವಕೀಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌  ವಕೀಲರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ  ವಕೀಲರ ಸಂಘದ ಸದಸ್ಯರು ಮಂಗಳವಾರ ಕಲಾಪದಿಂದ ದೂರ ಉಳಿದರು.

ಸಂಘದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ಮಾಡಿದ ಅವರು, ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಹಾಗೂ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ರಾಜ್ಯಪಾಲರಿಗೆ, ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

‘ವಕೀಲರು ರೈತರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಾಗ ಶಿವಕುಮಾರ್ ಹೇಳಿದ್ದಾರೆ. ಇದರಿಂದ ವಕೀಲರ ಗೌರವಕ್ಕೆ ಧಕ್ಕೆಯಾಗಿದೆ. ಕ್ಷಮೆ ಕೇಳುವವರೆಗೆ ನಿತ್ಯ ಬೆಳಿಗ್ಗೆ 10.30 ರಿಂದ ಒಂದು ಗಂಟೆ ಕಾಲ ಪ್ರತಿಭಟನೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಬಸವರಾಜ ಗದ್ದಿ ಹೇಳಿದರು.

ADVERTISEMENT

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿಳಂಬ ನೀತಿಯಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ರೈತರ ಮನವಿ ನ್ಯಾಯಾಲಯದಲ್ಲಿ ವಾದ ಮಾಡಲಾಗುತ್ತದೆ. ಕಾನೂನು ಪ್ರಕಾರ ಪರಿಹಾರ ಪಡೆದುಕೊಳ್ಳಲಾಗುತ್ತದೆ. ಆದರೆ, ಉಪಮುಖ್ಯಮಂತ್ರಿ ವಕೀಲರ ವೃತ್ತಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌. ಮಿಟ್ಟಲಕೋಡ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಅವರಿಗೂ ಮನವಿ ಸಲ್ಲಿಸಿದ್ದೇವೆ. ರಾಜ್ಯದ ಎಲ್ಲ ವಕೀಲರೊಂದಿಗೂ ಮಾತನಾಡಿ ಬೆಂಬಲ ಕೇಳುತ್ತೇವೆ. ಕ್ಷಮೆ ಕೇಳುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.

ಸಂಘದ ಸದಸ್ಯರೂ ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ ಅವರಿಗೂ ಮನವಿ ಸಲ್ಲಿಸಿ, ಪ್ರತಿಭಟನೆಗೆ ಆಹ್ವಾನಿಸುತ್ತೇವೆ. ಈ ಹಿಂದೆಯೂ ಹೇಳಿಕೆ ನೀಡಿದಾಗ ಸಮಾಧಾನದಿಂದ್ದೆವು. ಈಗ ಅದನ್ನೇ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಸಂಘದ ಕಾರ್ಯದರ್ಶಿ ಪ್ರಶಾಂತ ನಾರಾಯಣಕರ, ವಿ.ಬಿ. ಚೌಕಿಮಠ ಮಾತನಾಡಿದರು. ಉಪಾಧ್ಯಕ್ಷ ವಿ.ಜಿ. ಚಂದರಗಿ, ಖಜಾಂಚಿ ಜೆ.ಜೆ. ಕುಲಕರ್ಣಿ, ನವೀನ್‌ ವಾಲಿ, ಶ್ರೀಕಾಂತ ಹಿರೇಮಠ, ಎಸ್‌.ಬಿ. ನಾಡಗೌಡ, ಡಿ.ಬಿ. ಪೂಜಾರ, ಶಿವಾನಂದ ಟವಳಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.