ADVERTISEMENT

ರಬಕವಿ ಬನಹಟ್ಟಿ | ವೈದ್ಯರು, ಮುಖ್ಯ ವೈದ್ಯರೂ ಇಲ್ಲಿಲ್ಲ: ಜನರಿಗೆ ಸಂಕಟ ತಪ್ಪಿಲ್ಲ!

ರಬಕವಿ–ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೇ.70ರಷ್ಟು ಗುತ್ತಿಗೆ ನೌಕರರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:46 IST
Last Updated 7 ಸೆಪ್ಟೆಂಬರ್ 2025, 7:46 IST
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ   

ರಬಕವಿ ಬನಹಟ್ಟಿ: ರಬಕವಿ–ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ಇಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿ ಶೇ. 70 ರಷ್ಟು ಸಿಬ್ಬಂದಿ ಗುತ್ತಿಗೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಚೆಗೆ ನಡೆದ ವರ್ಗಾವಣೆಯ ಸಂದರ್ಭದಲ್ಲಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ವೈದ್ಯಾಧಿಕಾರಿಗಳ ಜೊತೆಗೆ ಚಿಕ್ಕ ಮಕ್ಕಳ ಮತ್ತು ಪ್ರಸೂತಿ ತಜ್ಞರು ಬೇರೆ ಕಡೆಗೆ ವರ್ಗಾವಣೆಗೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ಕಾಯಂ ವೈದ್ಯರುಗಳ ಜೊತೆಗೆ ಮುಖ್ಯ ವೈದ್ಯಾಧಿಕಾರಿಗಳ ಅವಶ್ಯಕತೆ ಇದೆ. ಈಗ ಕೇವಲ ದಂತ ವೈದ್ಯರು ಮಾತ್ರ ಇಲ್ಲಿ‍ದ್ದಾರೆ.

’ಈಗಾಗಲೇ ಜಮಖಂಡಿಯಿಂದ ಚಿಕ್ಕ ಮಕ್ಕಳ ತಜ್ಞರನ್ನು ನಿಯೋಜನೆ ಮಾಡಲಾಗಿದೆ. ಸ್ಥಳೀಯವಾಗಿ ಪ್ರಸೂತಿ ತಜ್ಞರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಇನ್ನೂ ಎಕ್ಸರೆಗೆ ಸಂಬಂಧಪಟ್ಟ ತಂತ್ರಜ್ಞರ ಕೊರತೆ ಇದ್ದು, ಬಾಗಲಕೋಟೆಯಿಂದ ಒಬ್ಬರನ್ನು ನಿಯೋಜನೆ ಮಾಡಲಾಗಿತ್ತು. ಅವರು ಒಂದು ದಿನ ಕರ್ತವ್ಯಕ್ಕೆ ಹಾಜರಾಗಿ ಹೋದವರು ಮತ್ತೆ ಬಂದಿಲ್ಲ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಜಿ.ಎಸ್.ಗಲಗಲಿ ತಿಳಿಸಿದರು.

ಹತ್ತು ಡಿ. ಗ್ರೂಪ್‌ ನೌಕರರಲ್ಲಿ ಆರು ಜನರು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಬಕವಿ–ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರವು ರಬಕವಿ, ಬನಹಟ್ಟಿ, ರಾಂಪುರ ಮತ್ತು ಹೊಸೂರು ಊರುಗಳನ್ನು ಒಳಗೊಂಡಿದೆ. ನಗರದ ಮೂರು ಕಡೆಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲಾಗಿತ್ತು. ಅಲ್ಲಿಯೂ ವೈದ್ಯರ ಕೊರತೆ ಇದೆ. ಇದರಿಂದಾಗಿ ಸಮುದಾಯ ಕೇಂದ್ರಕ್ಕೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ADVERTISEMENT

ಜಮಖಂಡಿ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಇಲ್ಲಿಯ ಉಸ್ತುವಾರಿ ನೀಡಲಾಗಿದೆ. ಈಗ ಇಲ್ಲಿಯ ಗುತ್ತಿಗೆಯ ವೈದ್ಯರುಗಳು ಶವ ಪರೀಕ್ಷೆಯ ವರದಿ ಬರೆಯಬೇಕಾಗಿದೆ. ಇದೂ ಸಮಸ್ಯೆಯಾಗಿದೆ. ಕಾಯಂ ವೈದ್ಯರು ಮಾತ್ರ ಮರಣೋತ್ತರ ಪರೀಕ್ಷಾ ವರದಿ ಬರೆಯಬೇಕು. ಆದರೆ, ಇಲ್ಲಿ ಉಸ್ತುವಾರಿ ವೈದ್ಯರು ಬರೆಯಬೇಕಾಗಿದೆ.  ಇದರ ಜತೆಗೆ ಸಹಿ, ಸಿಬ್ಬಂದಿ ವರ್ಗದ ಸಂಬಳ ಮತ್ತು ಇನ್ನಿತರ ಆಡಳಿತಾತ್ಮಕ ಕಾರ್ಯಗಳಿಗೆ ಸಿಬ್ಬಂದಿಗಳು ಜಮಖಂಡಿಗೆ ಹೋಗುವ ಅನಿವಾರ್ಯತೆ ಉಂಟಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರುಗಳಿಲ್ಲದೇ ಇಲ್ಲದೆ ಇರುವುದರಿಂದ ಸ್ಥಳೀಯ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಜನರಿಗೂ ಆರ್ಥಿಕ ಸಮಸ್ಯೆಯಾಗಿದೆ.

’ಮೇಲಾಧಿಕಾರಿಗಳು ಇತ್ತ ಗಮನ ನೀಡಿ ರಬಕವಿ–ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆದಷ್ಟು ಬೇಗನೆ ಕಾಯಂ ವೈದ್ಯರುಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಗಮನ ನೀಡಬೇಕು’ ಎನ್ನುತ್ತಾರೆ ಸ್ಥಳೀಯರಾದ ಶ್ರೀಶೈಲ ಬೀಳಗಿ, ಶಿವಾನಂದ ಕಾಗಿ, ಶಿವಾನಂದ ಗಾಯಕವಾಡ, ಗೌರಿ ಮಿಳ್ಳಿ ಆಗ್ರಹಿಸಿದ್ದಾರೆ.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿರುವು ಜನರು ಔಷಧಿ ಪಡೆಯಲು ಸರತಿಯಲ್ಲಿ ನಿಂತಿರುವುದು
ಕೆಲವು ವೈದ್ಯರುಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ದರಿಂದ ವರ್ಗಾವಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿಯಾಗಿ ಕಾಯಂ ವೈದ್ಯರುಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
– ಸಿದ್ದು ಸವದಿ, ಶಾಸಕ ತೇರದಾಳ ಮತಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.