
ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ ಯೋಜನೆಗಳ ಕುರಿತು ಜರುಗಿದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಂದಾಜು ₹200 ಕೋಟಿ ಮೊತ್ತದ ಯೋಜನಾ ವರದಿ ಸಿದ್ದಪಡಿಸಬೇಕಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಬೇಕು’ ಎಂದರು.
ಬಾದಾಮಿಯ ಎಪಿಎಂಸಿ ಜಮೀನಿನಲ್ಲಿ ಮುಖ್ಯವಾಗಿ ಪಾರ್ಕಿಂಗ್ ಪ್ಲಾಜಾ ನಿರ್ಮಾಣ ಮಾಡುವುದು, ಅಲ್ಲಿಂದ ಗುಹಾಂತರ ದೇವಾಲಯಕ್ಕೆ ಹೋಗಲು ಸಂಪರ್ಕ ರಸ್ತೆ ನಿರ್ಮಾಣದ ಯೋಜನೆ, ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಅಗಸ್ತ್ಯ ಹೊಂಡದ ಸುತ್ತಲೂ ಗ್ಯಾಲರಿ ಜೊತೆಗೆ ಸಂಗೀತ ಕಾರಂಜಿ ನಿರ್ಮಾಣ ಕಾಮಗಾರಿಯನ್ನು ಸೇರಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ‘ಮುಖ್ಯವಾಗಿ ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ, ಅಗಸ್ತ್ಯ ಹೊಂಡ ಅಭಿವೃದ್ಧಿ ಯಾವ ರೀತಿ ಮಾಡುತ್ತೀರಿ? ಐಹೊಳೆ, ಪಟ್ಟದಕಲ್ಲಿನ ಯೋಜನೆಗಳ ಬಗ್ಗೆ ತಿಳಿಸಿದರೆ ಅದರಲ್ಲಿ ಏನು ಬದಲಾವಣೆ ಮಾಡಬೇಕು. ಏನು ಸೇರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಮೊದಲು ಪ್ರವಾಸಿ ತಾಣಗಳ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಯೋಜನಾ ವರದಿ ಸಿದ್ದಪಡಿಸಬೇಕು. ಪ್ರವಾಸಿ ತಾಣಗಳ ಪ್ರಸ್ತುತ ವಸ್ತುಸ್ಥಿತಿ, ಪಾರಂಪರಿಕ ತಾಣಗಳ ಸಂರಕ್ಷಣೆ, ಸ್ಥಳೀಯ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸುಧಾರಣೆ, ರಸ್ತೆ ಸಂಪರ್ಕ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಹಾಗೂ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.
ವರ್ಚ್ಯುವಲ್ ಮೂಲಕ ಸಭೆಗೆ ಹಾಜರಾಗಿದ್ದ ಆರ್ಕಿಟೆಕ್ಟ್ ಪ್ರಶಾಂತ ಮಾತನಾಡಿ, ‘ಪ್ರವಾಸಿ ತಾಣಗಳಲ್ಲಿ ಮುಖ್ಯವಾಗಿ ಗುಣಮಟ್ಟದ ಹೋಟೆಲ್‍ಗಳ ಕೊರತೆ ಇದೆ. ವಿದೇಶದಿಂದ ಬರುವ ಪ್ರವಾಸಿಗರಿಗೆ ಗುಣಮಟ್ಟದ ಊಟ ಸಿಗುವಂತೆ ಮಾಡಬೇಕು. ಪಟ್ಟದಕಲ್ಲು, ಐಹೊಳೆಯಲ್ಲಿ ಆ ವ್ಯವಸ್ಥೆ ಇರುವುದಿಲ್ಲ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬಾದಾಮಿಗೆ ನೇರವಾಗಿ ಬರಲು ಹವಾನಿಯಂತ್ರಿತ ಬಸ್ ಸೌಲಭ್ಯ ಆಗಬೇಕು. ಕೆಂದೂರು ಕೆರೆ ಅಭಿವೃದ್ಧಿ ಪಡಿಸುವ ಮೂಲಕ ಅಲ್ಲಿ ಜಂಗಲ್ ರೆಸಾರ್ಟ್ ಪ್ರಸ್ತಾವ ಮಾಡಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.