ADVERTISEMENT

ಕುಡಿದು ವಾಹನ ಚಾಲನೆ:₹10 ಸಾವಿರ ದಂಡ!

ಬಾದಾಮಿ, ಜಮಖಂಡಿಯಲ್ಲಿ ಪ್ರತ್ಯೇಕ ಪ್ರಕರಣ: ನ್ಯಾಯಾಲಯಕ್ಕೆ ದಂಡ ಪಾವತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:15 IST
Last Updated 1 ಸೆಪ್ಟೆಂಬರ್ 2019, 16:15 IST

ಬಾಗಲಕೋಟೆ: ಜಿಲ್ಲೆಯಲ್ಲಿ ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಜೇಬು ತುಂಬಿಸಿಕೊಳ್ಳುವ ಕಾಲ ಬಂದೇ ಬಿಟ್ಟಿದೆ. ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಭಾರೀ ದಂಡ ತೆರಬೇಕಾಗಿದೆ. ಅದಕ್ಕೆ ಪೂರಕವಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ ಸವಾರರಿಗೆ ತಲಾ ₹10,000 ದಂಡ ವಿಧಿಸಲಾಗಿದೆ.

ಬಾದಾಮಿ ಹಾಗೂ ಜಮಖಂಡಿ ನ್ಯಾಯಾಲಯಗಳಿಗೆ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ. ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ. ಹೊಸ ಕಾಯ್ದೆಯ ಜಾರಿ ನಂತರ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಸವಾರರಿಂದ ಜಿಲ್ಲೆಯಲ್ಲಿ ವಸೂಲಿ ಮಾಡಲಾದ ಅತಿ ಹೆಚ್ಚಿನ ದಂಡದ ಮೊತ್ತ ಇದಾಗಿದೆ.

ಬಾದಾಮಿಯಲ್ಲೇ ಮೊದಲು: ಕುಡಿದು ವಾಹನ ಚಾಲನೆ ಮಾಡಿ ಸಂಚಾರ ಪೊಲೀಸರ ಕೈಗೆ ಸಿಕ್ಕುಬಿದ್ದ ಅಲ್ಲಿನ ಶಿಪ್ಪರಮಟ್ಟಿ ಗ್ರಾಮದ ವ್ಯಕ್ತಿಯೊಬ್ಬರುಬಾದಾಮಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆಗಸ್ಟ್ 28ರಂದು ₹10,000 ದಂಡ ಪಾವತಿಸಿದ್ದಾರೆ. ತಿದ್ದುಪಡಿಯಾದ ಕಾಯ್ದೆಯಡಿ ಜಿಲ್ಲೆಯಲ್ಲಿ ಚಾಲಕರೊಬ್ಬರು ಹೆಚ್ಚು ದಂಡ ಭರಿಸಿದ ಮೊದಲ ಪ್ರಕರಣ ಇದು.

ADVERTISEMENT

ಆಗಸ್ಟ್ 31ರಂದು ಜಮಖಂಡಿಯಲ್ಲಿ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ ವಾಹನ ಚಾಲಕ ಅಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ₹10 ಸಾವಿರ ದಂಡ ಪಾವತಿಸಿದ್ದಾರೆ. ಜೊತೆಗೆ ಲೈಸೆನ್ಸ್ ಇಲ್ಲದೇ ಚಾಲನೆ ಮಾಡುತ್ತಿದ್ದ ಕಾರಣ ಹೆಚ್ಚುವರಿಯಾಗಿ ₹500 ದಂಡ ಕೂಡ ವಸೂಲಿ ಮಾಡಲಾಗಿದೆ.

‘ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆ ಮಾಡಲು ಜಿಲ್ಲೆಯಲ್ಲಿ 65 ಬ್ರೀತ್ ಅನಲೈಸರ್ ಯಂತ್ರಗಳನ್ನು ಸಂಚಾರ ವಿಭಾಗದ ಪ್ರತಿಯೊಬ್ಬ ಅಧಿಕಾರಿಗೂ ಕೊಡಲಾಗಿದೆ. ಮಿತಿಗಿಂತ ವೇಗವಾಗಿ ಸಾಗುವ ವಾಹನಗಳ ಪತ್ತೆಗೆ ಎಲೆಕ್ಟ್ರಾನಿಕ್‌ ಬೋರ್ಡ್ ಅಳವಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕಳೆದ ವಾರ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.