ADVERTISEMENT

ಮಹಾಲಿಂಗಪುರ | ಕಾಗಿ ಪ್ಲಾಟ್‍: ನೀರಿದ್ದರೂ ನಿರ್ವಹಣೆ ಕೊರತೆ; ಪರದಾಟ

* ಕೊಳವೆಬಾವಿಗೆ ಪೈಪ್ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 7:47 IST
Last Updated 12 ಏಪ್ರಿಲ್ 2025, 7:47 IST
ಮಹಾಲಿಂಗಪುರದ ಕಾಗಿ ಪ್ಲಾಟ್‍ನಲ್ಲಿ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು 
ಮಹಾಲಿಂಗಪುರದ ಕಾಗಿ ಪ್ಲಾಟ್‍ನಲ್ಲಿ ನೀರಿಗಾಗಿ ಪರದಾಡುತ್ತಿರುವ ಮಹಿಳೆಯರು    

ಮಹಾಲಿಂಗಪುರ: ಪಟ್ಟಣದ 11ನೇ ವಾರ್ಡ್‍ನ ಚಿಮ್ಮಡಗಲ್ಲಿಯ ಕಾಗಿ ಪ್ಲಾಟ್‍ನಲ್ಲಿ ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಕೊಡ ನೀರಿಗಾಗಿ ನಿವಾಸಿಗಳು ಬಡಾವಣೆಯಿಂದ ಬಡಾವಣೆಗೆ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಾಗಿ ಪ್ಲಾಟ್‍ನಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಕೊಳವೆಬಾವಿ ಮೂಲಕ ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಯಿಂದ ನೀರು ಬರುತ್ತಿಲ್ಲ. ಇದರಿಂದ ಸಮಸ್ಯೆ ತೀವ್ರವಾಗಿದೆ. ಇದರ ಪಕ್ಕದಲ್ಲೇ ಮತ್ತೊಂದು ಕೊಳವೆಬಾವಿ ಕೊರೆಸಿ ಅದು ಸಫಲವಾಗಿದ್ದರೂ ಅದಕ್ಕೆ ಪೈಪ್ ಅಳವಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ನೀರಿದ್ದರೂ ನಿರ್ವಹಣೆ ಕೊರತೆಯಿಂದ ಪ್ಲಾಟ್‍ಗೆ ನೀರು ಪೂರೈಕೆಯಾಗುತ್ತಿಲ್ಲ.

‘ಸಮರ್ಪಕ ನೀರು ಸಿಗದ ಬಗ್ಗೆ ಹಲವು ಬಾರಿ ಪುರಸಭೆ ಕಚೇರಿಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಅವರಿಗೆ ನೀರಿನ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿಲ್ಲ’ ಎಂದು ಪ್ಲಾಟ್‍ನ ಮಹಿಳೆಯರು ಆರೋಪಿಸುತ್ತಾರೆ.

ADVERTISEMENT

‘ಪ್ಲಾಟ್‍ನಲ್ಲಿರುವ ಹಳೆಯ ಹಾಗೂ ಹೊಸ ಕೊಳವೆಬಾವಿಯನ್ನು ಪುರಸಭೆ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡಬೇಕಿದೆ. ಕೂಲಿ ನಾಲಿ ಮಾಡಿ ಬದುಕು ನಡೆಸುತ್ತಿದ್ದೇವೆ. ದಿನ ಬೆಳಗಾದರೆ ನೀರಿಗಾಗಿ ಪರದಾಟ ನಡೆಸುವಂತಾಗಿದೆ. ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನೀರು ಇಲ್ಲದಿದ್ದರೆ ಬದುಕುವುದು ಹೇಗೆ’ ಎಂದು ಕೆಲ ಮಹಿಳೆಯರು ಪ್ರಶ್ನಿಸುತ್ತಾರೆ.

ಪ್ಲಾಟ್‍ನಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಂಡು ನೀರು ಪೂರೈಸಲು ಸೂಚಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೊಳವೆ ಬಾವಿ ಸಮರ್ಪಕ ನಿರ್ವಹಣೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ
ಬಲವಂತಗೌಡ ಪಾಟೀಲ ವಾರ್ಡ್ ಸದಸ್ಯ
‘ಹೊಸ ಪೈಪ್ ಅಳವಡಿಸಿ ನೀರು ಪೂರೈಸಲು ಕ್ರಮ’
‘ಹೊಸ ಕೊಳವೆ ಬಾವಿಗೆ ಅಳವಡಿಸಲು ಪೂರೈಕೆಯಾಗಿದ್ದ ಪೈಪ್ ಕಳಪೆ ಮಟ್ಟದಾಗಿದ್ದು ಮರಳಿ ಕಳುಹಿಸಲಾಗಿದೆ. ಹೊಸ ಪೈಪ್ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಎರಡು ದಿನದಲ್ಲಿ ಹೊಸ ಪೈಪ್ ಅಳವಡಿಸಿ ನೀರು ಪೂರೈಸಲಾಗುವುದು’ ಎಂದು ಮಹಾಲಿಂಗಪುರ ಪುರಸಭೆ ಕಿರಿಯ ಎಂಜಿನಿಯರ್ ಎಸ್.ಎಂ.ಕಲಬುರಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.