ADVERTISEMENT

ಇ–ಲೋಕದಾಲತ್ ಸೆ.19ಕ್ಕೆ

ಕೋವಿಡ್ ಹಿನ್ನೆಲೆಯಲ್ಲಿ ವ್ಯವಸ್ಥೆ: ನ್ಯಾ. ಅರವಿಂದಕುಮಾರ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:55 IST
Last Updated 28 ಆಗಸ್ಟ್ 2020, 16:55 IST

ಬಾಗಲಕೋಟೆ: ‘ಕೋವಿಡ್–19 ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಮೆಗಾ ಇ–ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕಕ್ಷಿದಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು‘ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ್ ಹೇಳಿದರು.

ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ವರಿಗೂ ನ್ಯಾಯ, ಸಮಾನ ಅವಕಾಶ ಎಂಬುದು ಲೋಕ ಅದಾಲತ್ ಧ್ಯೇಯವಾಗಿದೆ. ಕಕ್ಷಿದಾರರು, ಎದುರಾದರರು ಹಾಗೂ ವಕೀಲರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಇ–ಲೋಕಅದಾಲತ್ ಆಯೋಜಿಸಲಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ನಾಲ್ಕು ಸಭೆಗಳನ್ನು ನಡೆಸಲಾಗಿದೆ’ ಎಂದರು.

‘ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಈ ಅದಾಲತ್‌ಗಳು ನಡೆಯಲಿದ್ದು, ಕಕ್ಷಿದಾರರು ತಮ್ಮ ಮನೆಯಲ್ಲಿ ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ಮೊಬೈಲ್‌ ಫೋನ್‌ ಮೂಲಕ ಇ–ಲಿಂಕ್ ಬಳಸಿ ಕಲಾಪದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅದಕ್ಕೆ ಪೂರಕವಾಗಿ ವೆಬ್‌ಸೈಟ್ ವಿಳಾಸ ಶೀಘ್ರ ಪ್ರಕಟಿಸಲಾಗುವುದು’ ಎಂದರು.

ADVERTISEMENT

‘ಸುಪ್ರೀಂಕೋರ್ಟ್ ಕಾಲಕಾಲಕ್ಕೆ ನೀಡಿರುವ ತೀರ್ಪು ಆಧರಿಸಿ ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಮೊತ್ತ ನಿಗದಿಪಡಿಸಲಾಗುವುದು. ಕೋವಿಡ್‌ನ ಸಂಕಷ್ಟದ ವೇಳೆ ಕಕ್ಷಿದಾರರಿಗೆ ಇದರಿಂದ ಆರ್ಥಿಕ ನೆರವು ಆಗಲಿದೆ. ಆ ನಿಟ್ಟಿನಲ್ಲಿ ವಿಮಾ ಕಂಪೆನಿಗಳ ಉನ್ನತ ಅಧಿಕಾರಿಗಳೊಂದಿಗೂ ಈಗಾಗಲೇ ಸಭೆ ನಡೆಸಲಾಗಿದೆ. ಅಪಘಾತದಲ್ಲಿ ಆದ ಗಾಯದ ಬಗ್ಗೆ ವೈದ್ಯರ ಪ್ರಮಾಣಪತ್ರ, ಚಿಕಿತ್ಸಾ ವಿವರ, ಮರಣಪ್ರಮಾಣಪತ್ರ ಮೊದಲಾದ ದಾಖಲೆಗಳನ್ನು ವಕೀಲರ ಸಹಾಯದಿಂದ ಮೊದಲೇ ಅಪ್ಲೋಡ್ ಮಾಡಬಹುದಾಗಿದೆ’ ಎಂದು ಹೇಳಿದರು.

ಪ್ರಧಾನಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ಮಾತನಾಡಿ, ‘ಮೋಟಾರು ಅಪಘಾತ ಕಾಯ್ದೆ, ಚೆಕ್‌ಬೌನ್ಸ್, ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ನೀಡಿಕೆ, ಆಸ್ತಿ ಪಾಲು ದಾವೆ, ಬ್ಯಾಂಕ್ ದಾವೆ, ಒಕ್ಕಲೆಬ್ಬಿಸುವುದು ಹಾಗೂ ರಾಜಿಗೆ ಅರ್ಹವಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ‍ಪರಿಹರಿಸಲಾಗುತ್ತದೆ. ಜಿಲ್ಲೆಯಲ್ಲಿ ಲೋಕಅದಾಲತ್ ಎದುರು ಒಟ್ಟು 42,097 ಪ್ರಕರಣಗಳು ಬಾಕಿ ಇದ್ದು, ಮೆಗಾ ಇ–ಲೋಕಅದಾಲತ್‌ನಲ್ಲಿ ಪಾಲ್ಗೊಳ್ಳುವವರು ಸೆಪ್ಟೆಂಬರ್ 18ರವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಧಾನ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.