ADVERTISEMENT

ಮೂರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸಿಗದ ಪಹಣಿ: ಜನರ ಪರದಾಟ

ಆರ್.ಎಸ್.ಹೊನಗೌಡ
Published 27 ಫೆಬ್ರುವರಿ 2026, 9:02 IST
Last Updated 27 ಫೆಬ್ರುವರಿ 2026, 9:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜಮಖಂಡಿ: ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯಾದ್ಯಂತ ಹೊಸದಾಗಿ ಜಾರಿಗೆ ತಂದಿರುವ ಇ-ಸ್ವತ್ತು 2.0 ತಂತ್ರಾಂಶವು ಹಲವಾರು ಸಮಸ್ಯೆ ಎದುರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಇರುವ ಕೈಬರಹದ ಆಸ್ತಿ ದಾಖಲೆಗಳನ್ನು ಡಿಜಿಟಲ್‌ ಖಾತೆ ನೀಡಲು ಜಾರಿಗೆ ತಂದಿದ್ದಾರೆ. ಆದರೆ ಮೂರು ತಿಂಗಳಿಂದ ತಂತ್ರಾಂಶ ಕೆಲವು ಸೌಲಭ್ಯಕ್ಕೆ ಮಾತ್ರ ಸಿಮಿತವಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಟ್, ಮನೆ ಸೇರಿದಂತೆ ಕೃಷಿಯೇತರ ಸ್ಥಳಗಳನ್ನು ಮೊದಲು ಕೈಬರಹದ ಪಹಣಿ ನೀಡುತ್ತಿದ್ದರು, ನಂತರ ಕೈ ಬರಹದ ಪಹಣಿಯನ್ನು ಕಂಪ್ಯೂಟರ್ ಪಹಣಿ ಪಡೆಯಲು ಅರ್ಜಿ ಸಲ್ಲಿಸಿದರೆ ದಿಶಾಂಕ ಆ್ಯಪ್‌ ಬಳಸಿ ರಜಿಸ್ಟರ್ ಇಲ್ಲದೆ ವರ್ಗಾವಣೆ ಮಾಡಿ ಕೊಡುತ್ತಿದ್ದರು. ಇದು ಎಲ್ಲರಿಗೂ ಸರಳವಾಗಿತ್ತು.

ADVERTISEMENT

ಇ-ಸ್ವತ್ತು 2.0 ತಂತ್ರಾಂಶ ಬಂದಮೇಲೆ ಕಡ್ಡಾಯವಾಗಿ ಇಸಿ ಮತ್ತು ನೋಂದಣಿ ಪ್ರಮಾಣ ಪತ್ರ ಇದ್ದರೆ ಮಾತ್ರ ಡಿಜಿಟಲ್ ಪಹಣಿ ಸಿಗುತ್ತದೆ. ಇಲ್ಲವಾದರೆ ಇ-ಸ್ವತ್ತು 2.0 ತಂತ್ರಾಂಶ ಅರ್ಜಿ ತೆಗೆದುಕೊಳ್ಳುವದಿಲ್ಲ. ಗ್ರಾಮೀಣ ಭಾಗದಲ್ಲಿ ಶೇ.90 ಜನರ ಬಳಿ ನೋಂದಣಿ ಪ್ರಮಾಣ ಪತ್ರ ಇಲ್ಲದಿರುವ ಕಾರಣ ಡಿಜಿಟಲ್ ಪಹಣಿ ಸಿಗದೆ ಪರದಾಡುತ್ತಿದ್ದಾರೆ.

ಇಷ್ಟೊಂದು ಟೆಕ್ನಾಲಜಿ ಮುಂದುವರಿದಿದ್ದರು ಮೂರು ತಿಂಗಳಿಂದ ಈ ಸಮಸ್ಯೆಯ ಸಲುವಾಗಿ ಡಿಜಿಟಲ್ ಪಹಣಿ ಸಿಗುತ್ತಿಲ್ಲ, ಇ-ಸ್ವತ್ತು 2.0 ತಂತ್ರಾಂಶದಲ್ಲಿ ಇಸಿ ಮತ್ತು ನೋಂದಣಿ ಪ್ರಮಾಣ ಪತ್ರ ಕಡ್ಡಾಯ ಮಾಡದೆ ಮೊದಲಿನಂತೆ ಆಸ್ತಿ ಮಾಲಿಕರಿಂದ ಅರ್ಜಿ ತೆಗೆದುಕೊಂಡು ಅವರ ಗ್ರಾಮಠಾಣಾ ವ್ಯಾಪ್ತಿಯ ದಾಖಲೆಗಳನ್ನು ಪರಿಶೀಲನೆ ಮಾಡಿ ಪಹಣಿ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ.

ಬ್ಯಾಂಕ್ ಸಾಲ, ಮನೆ ನೋಂದಣಿ, ಕಟ್ಟಡ ಅನುಮತಿ, ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ಅನೇಕ ಅಗತ್ಯ ಕಾರ್ಯಗಳಿಗೆ ಮನೆ ಪಹಣಿ ದಾಖಲೆ ಅವಶ್ಯಕವಾಗಿದೆ. ಆದರೆ ತಂತ್ರಾಂಶ ಕಾರ್ಯನಿರ್ವಹಿಸದೇ ಇರುವುದರಿಂದ ಕೆಲಸ ಬಿಟ್ಟು ಪಂಚಾಯತಿಗೆ ಜನರು ದಿನಂಪ್ರತಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಮತ್ತು ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ ಗ್ರಾಮೀಣ ಭಾಗದ ಜನರಿಗೆ ಡಿಜಿಟಲ್ ಪಹಣಿ ಸಿಗುತ್ತಿಲ್ಲ, ಪ್ರತಿದಿನ ಸಾಮಾನ್ಯ ಜನರು ಅಲೆದಾಡುತ್ತಿದ್ದಾರೆ, ಅನಿವಾರ್ಯ ಇದ್ದವರಿಗೆ ಕೈ ಬರಹ ಪಹಣಿ ನೀಡುತ್ತಿದ್ದೆವೆ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಸುರೇಶ ಕಡಪಟ್ಟಿ, ಪಿಡಿಓ
ಮೂರು ತಿಂಗಳಿಂದ ಇ-ಸ್ವತ್ತು 2.0 ತಂತ್ರಾಂಶದಿಂದ ಜನರಿಗೆ ಅನಾನುಕೂಲವಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಇದೆ, ಈ ಬಗ್ಗೆ ಸರ್ಕಾರದ ಹಾಗೂ ಇಲಾಖೆ ಮುಖ್ಯಸ್ಥರ ಗಮನಕ್ಕೆ ಇದ್ದು ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ.
– ಸಿಇಓ ಶಶೀಧರ, ಕುರೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.