ADVERTISEMENT

ಮನೆ ಮನೆಗೆ ಬಂದ ಜೋಕುಮಾರಸ್ವಾಮಿ: ಕೃಷಿಕ ಮಹಿಳೆಯರಿಂದ ಆರಾಧನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 4:38 IST
Last Updated 15 ಸೆಪ್ಟೆಂಬರ್ 2024, 4:38 IST
ಬಾದಾಮಿಯಲ್ಲಿ ಜೋಕುಮಾರಸ್ವಾಮಿ ಮೂರ್ತಿಯನ್ನು ಮಹಿಳೆಯರು ಬೆತ್ತದ ಬುಟ್ಟಿಯಲ್ಲಿ ಮನೆ ಮನೆಗೆ ಹೊತ್ತು ಸಾಗಿದರು
ಬಾದಾಮಿಯಲ್ಲಿ ಜೋಕುಮಾರಸ್ವಾಮಿ ಮೂರ್ತಿಯನ್ನು ಮಹಿಳೆಯರು ಬೆತ್ತದ ಬುಟ್ಟಿಯಲ್ಲಿ ಮನೆ ಮನೆಗೆ ಹೊತ್ತು ಸಾಗಿದರು   

ಬಾದಾಮಿ: ಗಣೇಶ ಮೂರ್ತಿ ವಿಸರ್ಜನೆಯಾದ ನಂತರ ಭಾದ್ರಪದ ಮಾಸದ ಅಷ್ಟಮಿ ದಿನ ಜನಿಸುವ ದೇವರು ಜೋಕುಮಾರಸ್ವಾಮಿ. ಉತ್ತರ ಕರ್ನಾಟಕದಲ್ಲಿ ಕೃಷಿಕರ ಜನಪದ ಮತ್ತು ಮಳೆ ತರುವ ದೇವರು ಜೋಕುಮಾರಸ್ವಾಮಿ ಎಂದು ಕೃಷಿಕರು ನಂಬಿದ್ದಾರೆ.

ಗಣೇಶ ಮೋದಕಗಳನ್ನು ಸವಿದು ಭೂಲೋಕದಲ್ಲಿ ಜನರು ಸುಖಿಯಾಗಿದ್ದಾರೆ ಎಂದು ತಂದೆ-ತಾಯಿ ಶಿವ-ಪಾರ್ವತಿಗೆ ಸಂದೇಶ ಹೇಳುವುದರಿಂದ ಗಣೇಶ ಮಳೆ ತರುವುದಿಲ್ಲ ಎಂದು ಕೃಷಿಕರ ನಂಬಿಕೆ. ಜೋಕುಮಾರ ಸಾಯುವ ವರೆಗೆ ಮಳೆಯಾಗುವುದಿಲ್ಲ. ಸತ್ತ ಮೇಲೆ ಮಳೆಯಾಗುತ್ತದೆ ಎಂದು ರೈತರು ನಂಬಿದ್ದಾರೆ. ಜೋಕುಮಾರನ ಬರುವನ್ನೇ ಕೃಷಿಕ ಕುಟುಂಬಗಳು ಕಾಯುತ್ತಿವೆ.

ಜೋಕುಮಾರ ಮನೆಗೆ ಬಂದಾಗ ಮಕ್ಕಳು ಮೈಮೇಲೆ ತಿಗಣಿ ಚಿಕ್ಕಾಡು ಬಿಡುವರು. ಜನರು ಸಂಕಷ್ಟದಲ್ಲಿ ಇದ್ದಾರೆಂದು ಶಿವನಿಗೆ ಹೇಳಿದಾಗ ಮಳೆಯಾಗುತ್ತದೆ ಎಂದು ರೈತರ ನಂಬಿಕೆ.

ADVERTISEMENT

ಜೋಕುಮುನಿ ಮತ್ತು ಜೇಷ್ಠಾದೇವಿ ಪುತ್ರ ಜೋಕುಮಾರಸ್ವಾಮಿ. ಚಿಕ್ಕವನಿರುವಾಗಲೇ ಕಾಮುಕ ಪ್ರವೃತ್ತಿ ಅಧಿಕವಾಗಿ ಕೊಲೆಗೀಡಾಗುವನು ಎಂಬ ಐತಿಹ್ಯವನ್ನು ಜನಪದದಲ್ಲಿ ಹೇಳಿದ್ದಾರೆ. ಈ ಕುರುಹಿಗಾಗಿ ಜೋಕುಮಾರನ ಮೂರ್ತಿಯನ್ನು ಬೆತ್ತದ ಬುಟ್ಟಿಯ ಬೇವಿನಸೊಪ್ಪಿನಲ್ಲಿ ತರುವ ಸಂಪ್ರದಾಯವಿದೆ.

ಅಡ್ಡಡ್ಡ ಮಳಿ ಬಂದು.. ಒಡ್ಡುಗಳೆಲ್ಲ ತುಂಬಿ… ಗೊಡ್ಡೆಮ್ಮೆಗಳು ಹೈನಾಗಿ… ಎಂದು ಮಹಿಳೆಯರು ಜನಪದ ಹಾಡು ಹಾಡುತ್ತ ಜೋಕುಮಾರನ ತಂದೆ-ತಾಯಿ, ಆಚಾರ, ಆಹಾರ ಕುರಿತು ಚರಿತ್ರೆಯನ್ನು ಹಾಡುವರು.

ಬಾರಕೇರ ಕುಂಟುಂಬದ ಮಹಿಳೆಯರು ಬೆತ್ತದ ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ಮಧ್ಯೆ ಜೋಕುಮಾರ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಮನೆ ಮನೆಗೆ ಹೊತ್ತು ಸಂಚರಿಸಿದರು. ಮನೆ ಮುಂದೆ ಬಂದು ‘ಯವ್ವಾ ಜೋಕಮಾರ ಬಂದಾನ. ಎಣ್ಣಿ, ಉಪ್ಪು ಮೆಣಸಿನಕಾಯಿ ತೊಗೊಂಡು ಬರ್ರಿ’ ಎಂದು ಕೂಗುವರು.

ಮನೆಯಲ್ಲಿದ್ದ ಮಹಿಳೆಯರು ಎಣ್ಣೆ, ಉಪ್ಪು ಮತ್ತು ಮೆಣಸಿನಕಾಯಿ ಮತ್ತು ಜೋಳವನ್ನು ನೈವೇದ್ಯ ಮಾಡಿದರು. ಅದಕ್ಕೆ ಪ್ರತಿಯಾಗಿ ಜೋಳದ ಅಂಬಲಿ ಮತ್ತು ಕಪ್ಪನ್ನು ಪ್ರಸಾದ ರೂಪದಲ್ಲಿ ಕೊಡುವರು.

ಕಪ್ಪನ್ನು ಗಂಡು ಮಕ್ಕಳ ಹಣೆಗೆ ತಿಲಕವಿಡುವರು. ಅಂಬಲಿಯನ್ನು ಹೊಲದ ಮಣ್ಣಿನಲ್ಲಿ ಹೂಳುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಅಂಬಲಿ ಹೊಲದಲ್ಲಿ ಹೂತರೆ ಬೆಳೆಗಳು ಅಧಿಕ ಇಳುವರಿ ಬರುವುದು ಎಂಬ ರೈತರ ನಂಬಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.