ಬಾಗಲಕೋಟೆ: ‘ರೈತರು ತಪ್ಪು ತಿಳಿವಳಿಕೆಯಿಂದ ಸಾಲಗಾರರಾಗಿದ್ದಾರೆ. ಅವರಿಗೆ ಸರಿಯಾದ ತಿಳಿವಳಿಕೆ ನೀಡಿದರೆ, ಅವರೇ ಸರ್ಕಾರಕ್ಕೆ ಸಾಲ ಕೊಡುವಂತಾಗುತ್ತಾರೆ’ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕೃಷಿಗೆ ಸಿಗಬೇಕಾದಷ್ಟು ಆದ್ಯತೆ ಸಿಕ್ಕಿಲ್ಲ. ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದರು.
‘ಸಾವಯವ ಉತ್ಪನ್ನಗಳು ತುಟ್ಟಿ ಇರುತ್ತವೆ. ಆದರೆ, ಆರೋಗ್ಯಕ್ಕೆ ಎಷ್ಟು ಮುಖ್ಯ ಎನ್ನುವುದು ಅರಿತುಕೊಳ್ಳಬೇಕು. ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಮುಟ್ಟಿಸಬೇಕು’ ಎಂದು ಹೇಳಿದರು.
‘ಚಾಲುಕ್ಯನಾಡು’ ಎಂಬ ವೆಬ್‌ಸೈಟ್ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಎಚ್.ವೈ. ಮೇಟಿ, ‘ಹೆಚ್ಚಿನ ಪ್ರಮಾಣದಲ್ಲಿ ಔಷಧ ಸಿಂಪಡಣೆ, ಕಲಬೆರಕೆಯಿಂದ ಆರೋಗ್ಯ ಹಾಳಾಗುತ್ತಿದೆ. ಮನುಷ್ಯನ ಆರೋಗ್ಯಕ್ಕೆ ಹಾನಿಯಾಗದಂತೆ ಉತ್ಪನ್ನ ಹೆಚ್ಚಿಸಬೇಕು’ ಎಂದರು.
‘ಗ್ರಾಮೀಣ ಮಟ್ಟದಲ್ಲಿಯೂ ಜಾಗೃತಿ ಮೂಡಿಸಬೇಕು. ಮಾರಾಟ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅರಿಸಿನ, ಒಣಮೆಣಸಿನಕಾಯಿ ಮುಂತಾದ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಅವುಗಳ ಮೌಲ್ಯವರ್ಧನೆಗೆ ಬೇಕಾದ ತಂತ್ರಜ್ಞಾನ ಒದಗಿಸಬೇಕಿದೆ. ಜೊತೆಗೆ ಮಾರುಕಟ್ಟೆ ಸೌಲಭ್ಯವೂ ಕಲ್ಪಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ರೈತರು ಉಪಉತ್ಪನ್ನಗಳ ಬಗ್ಗೆ ಗಮನ ಹರಿಸಬೇಕು. ಆರ್ಥಿಕ ಸುಧಾರಣೆಯಾದಾಗ ಮಾತ್ರ ಯೋಜನೆ ಜಾರಿಯ ಸಾರ್ಥಕತೆ ಮೂಡುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಹಾಂತೇಶ ಹಟ್ಟಿ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಗುರುದತ್ ಹೆಗಡೆ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಸ್.ಎಂ.ಕೋರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ್ ಹೂಗಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಇದ್ದರು.
‘ಮೌಲ್ಯವರ್ಧನೆ ಬಹಳ ಮುಖ್ಯ’:
ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲ ಎನ್ನುವುದಕ್ಕಿಂತ ಅವುಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು. ಅದಕ್ಕೆ ಬೇಕಾದ ಅನುಕೂಲಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ ಹೇಳಿದರು. ಕೃಷಿ ಸಚಿವರ ಮಾರ್ಗದರ್ಶನದಲ್ಲಿ ನಗರ ಮಾರುಕಟ್ಟೆಗೆ ರೈತರನ್ನು ಲಿಂಕ್ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು. ಜಿಲ್ಲೆಯ ಜವೆಗೋಧಿ ಅರಿಸಿನಕ್ಕೆ ಜಿಐ ಮಾನ್ಯತೆ ಪಡೆಯಲು ಜಿಲ್ಲಾಧಿಕಾರಿ ಅವರು ಶಿಫಾರಸು ಮಾಡಬೇಕು. ತಂತ್ರಜ್ಞಾನ ಮಾರುಕಟ್ಟೆ ಸೇರಿದಂತೆ ಎಲ್ಲ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಿಗಳಾಗಬೇಕು ಎಂದು ಹೇಳಿದರು. ಬಾಗಲಕೋಟೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಈಗಾಗಲೇ ₹6 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.