ADVERTISEMENT

ಮಹಾಲಿಂಗಪುರ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ಗುರುತು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:38 IST
Last Updated 9 ಜನವರಿ 2026, 7:38 IST
ಮಹಾಲಿಂಗಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಗುರುತಿಸಿದ ಜಾಗದಲ್ಲಿ ನಾಮಫಲಕ ಹಾಕಲಾಗಿದೆ
ಮಹಾಲಿಂಗಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಗುರುತಿಸಿದ ಜಾಗದಲ್ಲಿ ನಾಮಫಲಕ ಹಾಕಲಾಗಿದೆ   

ಮಹಾಲಿಂಗಪುರ: ಆಕಸ್ಮಿಕ ಬೆಂಕಿ ಅವಘಡದಿಂದ ಆಗುವ ಹಾನಿ ತಪ್ಪಿಸಲು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಅಗ್ನಿಶಾಮಕ ಇಲಾಖೆ ಮುಂದಾಗಿದ್ದು, ಠಾಣೆ ಸ್ಥಾಪಿಸಲು ಅಗತ್ಯವಿರುವ ಜಾಗವನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದೆ.

ಈ ಭಾಗದಲ್ಲಿ ಅಧಿಕ ಕಬ್ಬು ಬೆಳೆಯಲಾಗುತ್ತದೆ. ಪ್ರತಿವರ್ಷ ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡಲಾಗುತ್ತದೆ. ಈ ವೇಳೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಹಾನಿ ಆಗುತ್ತಿದೆ. ಅಲ್ಲದೆ, ಬೇರೆ ಬೇರೆ ಗೃಹ ಕೈಗಾರಿಕಾ ಉತ್ಪಾದನಾ ಘಟಕಗಳು ಇಲ್ಲಿದ್ದು, ಆಗಾಗ್ಗೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಈ ಕಾರಣ ಅಗ್ನಿಶಾಮಕ ಇಲಾಖೆಯು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಒಂದು ವರ್ಷದಿಂದ ಪ್ರಯತ್ನಿಸುತ್ತಿದೆ.

‘ನಗರದಲ್ಲಿ 10 ಕಿ.ಮೀ., ಗ್ರಾಮೀಣದಲ್ಲಿ 50 ಕಿ.ಮೀ. ವ್ಯಾಪ್ತಿಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕೆಂಬ ಮಾನದಂಡವನ್ನು ಕೇಂದ್ರ ಸರ್ಕಾರದ ಅಗ್ನಿ ಅವಘಡ ಕುರಿತ ಸಲಹಾ ಸಮಿತಿ ವಿಧಿಸಿದೆ. ಪಟ್ಟಣದಿಂದ 12 ಕಿ.ಮೀ. ದೂರದ ರಬಕವಿ-ಬನಹಟ್ಟಿ ಹಾಗೂ 20 ಕಿ.ಮೀ. ದೂರದ ಮುಧೋಳದಲ್ಲಿ ಅಗ್ನಿಶಾಮಕ ಠಾಣೆ ಇದೆ. ಆದರೆ, ಈ ಭಾಗದಲ್ಲಿ ಆಗುತ್ತಿರುವ ಹೆಚ್ಚಿನ ಅಗ್ನಿ ಅವಘಡ ತಪ್ಪಿಸಲು ಇಲ್ಲಿ ಠಾಣೆ ಸ್ಥಾಪಿಸುವುದು ಅಗತ್ಯವಿದೆ’ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

‘ರಬಕವಿ-ಬನಹಟ್ಟಿಯಲ್ಲಿ ಅಗ್ನಿಶಾಮಕ ಠಾಣೆ ಇದ್ದರೂ ಪ್ರಯೋಜನವಾಗುತ್ತಿಲ್ಲ. ತುರ್ತಾಗಿ ಸಮೀರವಾಡಿ ಸಕ್ಕರೆ ಕಾರ್ಖಾನೆಯ ವಾಹನವನ್ನೂ ತರಿಸಲಾಗುತ್ತಿದೆ. ಆದರೆ, ಸಮೀಪದ ಜಾಗದಲ್ಲಿ ಅಗ್ನಿ ಶಾಮಕ ಠಾಣೆ ಇದ್ದರೆ ಬೇಗ ಬಂದು ಬೆಂಕಿ ನಂದಿಸಬಹುದು. ಹೆಚ್ಚಿನ ಅನಾಹುತವನ್ನೂ ತಪ್ಪಿಸಬಹುದು’ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಾರೆ.

ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಉಚಿತವಾಗಿ 2 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕಳೆದ ವರ್ಷ ಜ.3 ರಂದು ಪತ್ರ ಬರೆದಿದ್ದಾರೆ. ಇದರನ್ವಯ ಮಹಾಲಿಂಗಪುರದ ರಿ.ಸ.ನಂ.29/1 ಕ್ಷೇತ್ರದ 2 ಎಕರೆ ಜಮೀನನ್ನು ಅಗ್ನಿಶಾಮಕ ಇಲಾಖೆಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ್ ಪ್ರಸ್ತಾವ ಸಲ್ಲಿಸಲಿದ್ದಾರೆ. ಈ ಕಾರಣದಿಂದ ಜಮೀನು ಪರಿಶೀಲಿಸಿ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಒಸಿ) ಸಲ್ಲಿಸಲು ಸಂಬಂಧಿಸಿದ ಏಳು ಇಲಾಖೆಗಳಿಗೆ ತಹಶೀಲ್ದಾರ್‌ ಅವರು ಪತ್ರ ಬರೆದಿದ್ದಾರೆ.

ಕಬ್ಬು ಬೆಳೆಯುವ ಪ್ರದೇಶ ಇರುವುದರಿಂದ ಮಹಾಲಿಂಗಪುರದಲ್ಲಿ ಅಗ್ನಿಶಾಮಕ ಠಾಣೆ ಅಗತ್ಯವಿದೆ. ಠಾಣೆ ಸ್ಥಾಪನೆಗೆ ಜಾಗ ಮಂಜೂರು ಮಾಡಲು ಇಲಾಖೆಗಳಿಂದ ಎನ್‍ಒಸಿ ಬಂದಿದೆ. ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಪ್ರಕಾಶ ಪವಾರಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.