ಬಾಗಲಕೋಟೆ: ಜಿಲ್ಲೆಯಲ್ಲಿ ಆಗಾಗ ನದಿಗಳು ಉಕ್ಕಿ ಪ್ರವಾಹ ಬಂದಾಗ ನದಿ ತೀರದ ಸಂತ್ರಸ್ತರು ನೆನಪಾಗುತ್ತಾರೆ. ಎಲ್ಲರೂ ಅವರ ಸಂಕಷ್ಟ ಪರಿಹರಿಸುವ ಭರವಸೆ ನೀಡುತ್ತಾರೆ. ನಂತರ ದಿನಗಳಲ್ಲಿ ಸಂತ್ರಸ್ತರ ಗೋಳು ಕೇಳುವವರಿಲ್ಲ.
ಬಾಗಲಕೋಟೆ ಜಿಲ್ಲೆಯಲ್ಲಿ ನದಿಗಳ ಪ್ರವಾಹದಿಂದ ಕೆಲವರು ಸಂತ್ರಸ್ತರಾದರೆ, ಇನ್ನು ಕೆಲವರು ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಮನೆ, ಹೊಲ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಇಬ್ಬರೂ ಸಂತ್ರಸ್ತರ ಸ್ಥಿತಿ ಚಿಂತಾಜನಕವಾಗಿದೆ.
ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಿಂದ 203 ಗ್ರಾಮಗಳು 2019ರಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಅದರಲ್ಲಿ ಹಲವು ಗ್ರಾಮಗಳ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಕೃಷ್ಣಾ ನದಿ ದಡದಲ್ಲಿರುವ 56, ಘಟಪ್ರಭಾದ 69 ಹಾಗೂ ಮಲಪ್ರಭಾ ದಡದಲ್ಲಿರುವ 63 ಗ್ರಾಮಗಳಿಗೆ ಪ್ರವಾಹ ಹೆಚ್ಚಾದಾಗ ನೀರು ನುಗ್ಗಬಹುದು ಎಂದು ಹಿಂದಿನ ಅನುಭವದ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ.
2019ರಲ್ಲಿ ಮೂರೂ ನದಿಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂದಿತ್ತು. ಮಲಪ್ರಭಾ ನದಿ ಪ್ರವಾಹದಿಂದ ಮೊದಲ ಬಾರಿಗೆ ಬಾದಾಮಿ, ಹುನಗುಂದ ತಾಲ್ಲೂಕಿನ ಹಲವಾರು ಹಳ್ಳಿಗಳು ಮುಳುಗಡೆಯಾಗಿದ್ದವು. ಕಿಲೋ ಮೀಟರ್‌ಗಟ್ಟಲೇ ನೀರು ಹರಡಿಕೊಂಡಿತ್ತು. ನಂತರದ ಕೆಲವ ವರ್ಷಗಳಲ್ಲಿ ಪ್ರವಾಹ ಬಂದಿದೆಯಾದರೂ ಆ ಪ್ರಮಾಣದಲ್ಲಿಲ್ಲ.
ವಿವಿಧ ಉದ್ಯಮಿಗಳ ನೆರವಿನಿಂದ ಜಿಲ್ಲೆಯ 50 ಗ್ರಾಮಗಳನ್ನು ‘ಆಸರೆ’ ಯೋಜನೆ ಹೆಸರಿನಡಿ 12 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಕೆಲವು ಗ್ರಾಮಗಳಲ್ಲಿ ಜನರು ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಮನೆಗಳು ಪಾಳು ಬಿದ್ದಿವೆ. ಅವುಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕಿದೆ.
ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಮುಧೋಳ ತಾಲ್ಲೂಕಿನ ಮಿರ್ಜಿ, ಜಮಖಂಡಿ ತಾಲ್ಲೂಕಿನ ತುಬಚಿ, ಟಕ್ಕಳಕಿ, ಮುತ್ತೂರು, ರಬಕವಿ–ಬನಹಟ್ಟಿ ತಾಲ್ಲೂಕಿನ ಹಳಿಂಗಳಿ, ನಂದಗಾಂವ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹ ಹೆಚ್ಚಾದರೆ, ಇವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಬಹಳ ವರ್ಷಗಳ ಹಿಂದೆ ಮನೆಗಳಿಗೆ ಪರಿಹಾರ ನೀಡಲಾಗಿದೆ. ಆದರೆ ಹಕ್ಕುಪತ್ರಗಳನ್ನು ಕೂಡಲೇ ನೀಡಲಿಲ್ಲ. ಇದರಿಂದಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ನೀರು ಬಂದರೆ ಏನು ಮಾಡುವುದು?ನಿಂಗನಗೌಡ ಪಾಟೀಲ ಸಂತ್ರಸ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.