ಬಾಗಲಕೋಟೆ: ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಹಿಂದಿನ ವರ್ಷಗಳಲ್ಲಿ ಪ್ರವಾಹದಿಂದ ಬಾಧಿತವಾಗಿರುವ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮುಂಗಾರು ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಮಳೆ ಆಗದಿದ್ದರೂ ಮಹಾರಾಷ್ಟ್ರದಲ್ಲಿ ಸುರಿವ ಮಳೆಯಿಂದ ಪ್ರವಾಹ ಉಂಟಾಗುತ್ತದೆ. ಪ್ರವಾಹ ನಿರ್ವಹಣೆಗೆ ಎಷ್ಟು ಸನ್ನದ್ಧರಾದರೂ ಸಾಲದು. ಪ್ರವಾಹ ಬಾಧಿತ ಗ್ರಾಮಗಳ ಮೇಲೆ ಸೂಕ್ಷ್ಮ ನಿಗಾ ವಹಿಸುವುದು ಅಗತ್ಯ’ ಎಂದು ತಿಳಿಸಿದರು.
‘ಕೃಷ್ಣಾ ನದಿ ಹರಿವಿನ ಪ್ರಮಾಣ 2 ಲಕ್ಷ ಕ್ಯುಸೆಕ್‌ಗೆ ಹೆಚ್ಚಾದಲ್ಲಿ ಜಮಖಂಡಿ ತಾಲ್ಲೂಕಿನ ಮುತ್ತೂರು, ಕಂಕಣವಾಡಿ, ತುಬಚಿ, ಆಲಗೂರ, ಚಿಕ್ಕಪಡಸಲಗಿ, ಮುಧೋಳ ತಾಲ್ಲೂಕಿನ ಉತ್ತೂರು, ಡವಳೇಶ್ವರ, ಮಿರ್ಜಿ, ಚನಾಳ, ನಂದಗಾವ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಈ ಪ್ರದೇಶಗಳಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಆಗಾಗ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ಅರಿಯಬೇಕು. ಮುಂಜಾಗ್ರತೆಯಾಗಿ ಕೈಗೊಂಡ ಸಿದ್ಧತೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸಬೇಕು’ ಎಂದರು.
ಮಲಪ್ರಭಾ ನದಿಯಿಂದ 32 ಸಾವಿರ ಕ್ಯುಸೆಕ್ ನೀರು ಬಂದರೂ ಸಹ ಬಾಧಿತ ಗ್ರಾಮಗಳಲ್ಲಿ ಹೆಚ್ಚಿನ ನಿಗಾ ವಹಿಸಿ ವಹಿಸಲು ಸೂಚಿಸಿದ ಅವರು, ಪ್ರವಾಹ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಇಲಾಖೆಗಳ ಸಹಭಾಗಿತ್ವ ಮುಖ್ಯ. ಲೋಕೋಪಯೋಗಿ ಹಾಗೂ ಹೆಸ್ಕಾಂನವರು ಸಮಸ್ಯೆಯಾಗುವ ಗ್ರಾಮಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಬೇಕು. ಬಾಧಿತವಾಗುವ ಪ್ರತಿ ಗ್ರಾಮಕ್ಕೂ ನೋಡಲ್ ಅಧಿಕಾರಿ ನೇಮಿಸಬೇಕು ಎಂದು ಸೂಚಿಸಿದರು.
ಮಳೆಯಿಂದಾಗುವ ಮನೆ, ಬೆಳೆ ಹಾನಿ ಮಾಹಿತಿ ಪಡೆಯಲು ತಂಡ ರಚನೆ ಮಾಡಬೇಕು. ಕೇಳಿದ ತಕ್ಷಣ ಅಂದಾಜು ಮಾಹಿತಿ ನೀಡಬೇಕು. ಲಭ್ಯವಿರುವ ಸಂಪನ್ಮೂಲ ಬಳಸಿ ಖಚಿತವಾಗಿ ಹಾನಿ ವಿವರ ಪಡೆಯುವ ಕಾರ್ಯವಾಗಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ ಇಲಾಖೆಯವರು ಅಗತ್ಯ ಕಾಳಜಿ ಕೇಂದ್ರ ಸಿದ್ಧವಾಗಿಟ್ಟುಕೊಂಡ ಬಗ್ಗೆ ಮಾಹಿತಿ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಲಭ್ಯತೆ ಬಗ್ಗೆ ಮಾಹಿತಿ ನೀಡಲು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎನ್.ವೈ. ಬಸರಿಗಿಡದ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.