ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿ ರಾಜ್ಯದ ವಿವಿಧ ಜಿಲ್ಲೆಗಳ ಬಯಲಾಟ ಕಲೆಗಳ ಅಧ್ಯಯನ ಹಾಗೂ ಪರಿಚಯಕ್ಕಾಗಿ ಜಿಲ್ಲಾವಾರು ಬಯಲಾಟ ಪರಿಚಯ ಪುಸ್ತಕ ಪ್ರಕಟಿಸಲು ಯೋಜನೆ ರೂಪಿಸಿದೆ. ಪುಸ್ತಕ ರಚನೆಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಯುವ ಸಂಶೋಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕನ್ನಡ, ಜಾನಪದ, ಭಾಷಾವಿಜ್ಞಾನ, ಸಮಾಜವಿಜ್ಞಾನ, ರಾಜ್ಯಶಾಸ್ತ್ರ ಅಥವಾ ಮಾನವ ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಡಾಕ್ಟರೇಟ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಆಯ್ಕೆಯಾದರು ತಮ್ಮ ಆಯ್ದ ಜಿಲ್ಲೆ ಬಯಲಾಟಗಳ ಕುರಿತು ಕನಿಷ್ಠ 100 ರಿಂದ ಗರಿಷ್ಠ 150 ಪುಟಗಳ ಎ4 ಗಾತ್ರದ ಪುಸ್ತಕವನ್ನು ಮೂರು ತಿಂಗಳೊಳಗೆ ರಚಿಸಬೇಕು. ಲೇಖಕರಿಗೆ ₹10,000 ಗೌರವ ಧನ ಹಾಗೂ 50 ಮುದ್ರಿತ ಪುಸ್ತಕ ನೀಡಲಾಗುವುದು.
ಪುಸ್ತಕದಲ್ಲಿ ಜಿಲ್ಲೆಯ ಭೌಗೋಳಿಕ, ಸಾಂಸ್ಕೃತಿಕ ಹಿನ್ನಲೆ, ಬಯಲಾಟ ಪ್ರಕಾರಗಳು, ಹಸ್ತಪ್ರತಿಗಳ ಶೋಧನೆ, ಕಲಾವಿದರು, ಜಾತ್ರೆ-ಹಬ್ಬಗಳ ಕಾಲದ ಪ್ರದರ್ಶನಗಳು ಸೇರಿದಂತೆ ವಿವಿಧ ಅಂಶ ಒಳಗೊಂಡಿರಬೇಕು. ಬಹುಪಾಲ ಮಾಹಿತಿ ಕ್ಷೇತ್ರ ಕಾರ್ಯದ ಆಧಾರಿತವಾಗಿರಬೇಕು. ಛಾಯಾಚಿತ್ರಗಳೂ ಅವಶ್ಯಕವಾಗಿವೆ.
ರಿಜಿಸ್ಟ್ರಾರ್, ಕರ್ನಾಟಕ ಬಯಲಾಟ ಅಕಾಡೆಮಿ, ಕಲಾಭವನ, ಸಾಂಸ್ಕೃತಿಕ ಸಂಕೀರ್ಣ, ಸೆಕ್ಟರ್-19, 6ನೇ ರಸ್ತೆ, ನವನಗರ, ಬಾಗಲಕೋಟೆ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 08354-235070 / 8970678147 ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.