ADVERTISEMENT

ಬಾಗಲಕೋಟೆ: ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಏಳು ವರ್ಷಗಳಿಂದಲೂ ಪೂರ್ಣಗೊಳ್ಳದ ನಿರ್ಮಾಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 6:46 IST
Last Updated 25 ಅಕ್ಟೋಬರ್ 2024, 6:46 IST
ಕಸದ ತೊಟ್ಟಿ ಸಾರ್ವಜನಿಕ ಗುಡಾವಣವಾದ ಗಾಂಧಿ ಭವನದ ಬಯಲು
ಕಸದ ತೊಟ್ಟಿ ಸಾರ್ವಜನಿಕ ಗುಡಾವಣವಾದ ಗಾಂಧಿ ಭವನದ ಬಯಲು   

ಗುಳೇದಗುಡ್ಡ: ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ಗಾಂಧಿ ಸ್ಮಾರಕ ಭವನದ ನಿರ್ಮಾಣ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ಸ್ಥಗಿತಗೊಂಡು, ಅಕ್ರಮ ಚಟುವಟಿಕೆಯ ಕೇಂದ್ರವಾಗಿದೆ.

ಈ ಮೊದಲು ಇದೇ ಜಾಗದಲ್ಲಿದ್ದ ಭವನದಲ್ಲಿ ಪುರಸಭೆಯ ವತಿಯಿಂದ ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಕಾರ್ಯಕ್ರಮಗಳ ಆಚರಣೆ ಮಾಡಲಾಗುತ್ತಿತ್ತು. ಆ ಭವನ ಶಿಥಿಲಾವಸ್ಥೆಗೆ ಬಂದಿದೆ ಎಂಬ ಕಾರಣಕ್ಕೆ ಕೆಡವಿ, ಹೊಸ ಭವನ ನಿರ್ಮಾಣ ಆರಂಭಿಸಲಾಗಿದೆ.

ಹಳೆಯ ಭವನ ಕೆಡವಲು ಆಗಿನ ಪುರಸಭೆ ಮಾಜಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ವಿರೋಧಿಸಿದರೂ ಪ್ರಯೋಜನವಾಗಲಿಲ್ಲ. ಈಗ ಕಾಮಗಾರಿ ಆರಂಭವಾಗಿ ಏಳು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯಿತ್ತಿಲ್ಲ.

ADVERTISEMENT

ಗಾಂಧಿ ಸ್ಮಾರಕ ಭವನದ ಆವರಣ ಈಗ ಕಸದ ತೊಟ್ಟಿಯಾಗುವುದರ ಜೊತೆಗೆ, ಯಾರು ಬೇಕಾದರೂ ಸಾಮಗ್ರಿ ಇಡುವ ಸಾರ್ವಜನಿಕ ಸ್ಥಳವಾಗಿದೆ ಮಾರ್ಪಟ್ಟಿದೆ. ಸ್ಮಾರಕದ ಬದಲು, ಬಯಲು ಮೂತ್ರಾಲಯವಾಗಿ ಮಾರ್ಪಾಡಾಗಿದೆ. ಬಿ.ಬಿ. ಚಿಮ್ಮನಕಟ್ಟಿ, ಎಂ.ಕೆ. ಪಟ್ಟಣಶೆಟ್ಟಿ, ಸಿದ್ದರಾಮಯ್ಯ, ಪ್ರಸ್ತುತ ಭೀಮಸೇನ ಚಿಮ್ಮನಕಟ್ಟಿ ಶಾಸಕರಾಗಿ ಕಾರ್ಯ ನಿರ್ವಹಿಸಿದರೂ ಕಾಮಗಾರಿ ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರಿಸಿಲ್ಲ.

₹1 ಕೋಟಿ ಅನುದಾನ: ಆರಂಭದಲ್ಲಿ ಪುರಸಭೆಯ ₹ 1ಕೋಟಿ ಅನುದಾನದೊಂದಿಗೆ ಕಟ್ಟಡ ಕಾಮಗಾರಿ ಆರಂಭಗೊಂಡರೂ ಆಮೆಗತಿಯಲ್ಲಿ ಸಾಗಿದೆ. ಭವನದಲ್ಲಿ 500 ಆಸನಗಳ ದೊಡ್ಡ ಒಳಾಂಗಣ, ಆಧುನಿಕ ಬೆಳಕು ವ್ಯವಸ್ಥೆ, ಆವರಣದಲ್ಲಿ ಉದ್ಯಾನ ನಿರ್ಮಾಣವಾಗಬೇಕಿದೆ.

ಆದಷ್ಟು ಬೇಗನೇ ಕಟ್ಟಡ ಕಾಮಗಾರಿ ಪೂರ್ಣಗೊಂಡು ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕಸದ ತೊಟ್ಟಿ ಸಾರ್ವಜನಿಕ ಗುಡಾವಣವಾದ ಗಾಂಧಿ ಭವನದ ಬಯಲು
ಇದ್ದ ಅನುದಾನ ಬಳಸಿ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಅದನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
–ಜ್ಯೋತಿ ಗೋವನಕೊಪ್ಪ, ಅಧ್ಯಕ್ಷೆ ಪುರಸಭೆ ಗುಳೇದಗುಡ್ಡ

ದೇಣಿಗೆ ಹಣದಲ್ಲಿ ನಿರ್ಮಾಣ

1948ರಲ್ಲಿ ಮಹಾತ್ಮ ಗಾಂಧಿ ನಿಧನದ ನಂತರ ದೇಶಾದ್ಯಂತ ಗಾಂಧಿ ಸ್ಮಾರಕ ನಿಧಿ ಸಂಗ್ರಹ ಆರಂಭವಾಯಿತು. ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರಾದ ಮಡಿವಾಳಪ್ಪ ಪಟ್ಟಣಶೆಟ್ಟಿ ಸಿದ್ರಾಮಪ್ಪ ತಿಪ್ಪಾ ಸಾಬಣ್ಣ ಸಿಂಧೆ ಲಕ್ಷ್ಮಣಸಾ ಕಾವಡೆ ಸೇರಿದಂತೆ ಅನೇಕರು ದಾನಿಗಳಿಂದ ₹50 ಸಾವಿರಕ್ಕೂ ಹೆಚ್ಚು ನಿಧಿ ಸಂಗ್ರಹಿಸಿದ್ದರು. ನಿಧಿ ಸಂಗ್ರಹದ ನೇತೃತ್ವ ವಹಿಸಿದ್ದ ಅಂಬಲಿ ಚನ್ನಬಸಪ್ಪ ಅವರು ₹15 ಸಾವಿರವನ್ನು ಪ್ರಾಂತೀಯ ಕೇಂದ್ರ ಸಮಿತಿಗೆ ಇಟ್ಟುಕೊಂಡು ಉಳಿದ ₹35 ಸಾವಿರವನ್ನು ಸ್ಮಾರಕ ಸಮಿತಿಗೆ ನೀಡಿ ಗಾಂಧಿ ಭವನ ಹೆಸರಿಡಲು ಸೂಚಿಸಿದ್ದರು. ಅದರಂತೆ 1951ರಲ್ಲಿ ಪ್ರವಾಸಿ ಮಂದಿರದ ಎದುರಿಗೆ ಇರುವ ವಿಶಾಲ ಜಾಗದಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡು 1957ರಲ್ಲಿ ಗಾಂಧಿ ಭವನ ಸುತ್ತಲೂ ಉದ್ಯಾನ ನಿರ್ಮಾಣವಾಗಿ ಅಂದಿನ ಹಣಕಾಸು ಸಚಿವ ಟಿ. ಮರಿಯಪ್ಪ ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.