ರಾಂಪುರ: ಸಮೀಪದ ಬೇವೂರ ಗ್ರಾಮದಲ್ಲಿ ಬುಧವಾರ ರಾತ್ರಿ ಸರಣಿ ಮನೆಗಳ್ಳತನ ನಡೆದಿದ್ದು, ಅಕ್ಕಸಾಲಿಗನ ಮನೆ ಸೇರಿ 3 ಮನೆಗಳಲ್ಲಿನ ಅಂದಾಜು 150 ಗ್ರಾಂ ಚಿನ್ನದ ಒಡವೆ, 555 ಗ್ರಾಂ ಬೆಳ್ಳಿ ಸಾಮಾನು ಹಾಗೂ ₹65 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ.
ಬೋಡನಾಯಕದಿನ್ನಿ ರಸ್ತೆಯಲ್ಲಿನ ಜನತಾ ಪ್ಲಾಟ್‌ನಲ್ಲಿ ಕಳ್ಳತನ ನಡೆದಿದ್ದು, ಅಕ್ಕಸಾಲಿಗ ಸುರೇಶ ವೆರ್ಣೇಕರ ಗಣೇಶ ಹಬ್ಬದ ಅಂಗವಾಗಿ ಮನೆಗೆ ಬೀಗ ಹಾಕಿ ಊರಿಗೆ ತೆರಳಿದ್ದು, ಅವರ ಮನೆಯಲ್ಲಿದ್ದ ಅಂದಾಜು 75 ಗ್ರಾಂ ಚಿನ್ನದ ಒಡವೆ ಹಾಗೂ 250 ಗ್ರಾಂ ಬೆಳ್ಳಿ ಸಾಮಾನು, ₹5 ಸಾವಿರ ನಗದು ದೋಚಿರುವ ಕಳ್ಳರು, ವಿಠ್ಠಲ ಭರಮಪ್ಪ ಹೊದ್ಲೂರ ಅವರ ಮನೆ ಬಾಗಿಲು ಮುರಿದು ಅಲ್ಲಿಯೂ 70 ಗ್ರಾಂ ಬಂಗಾರ ಹಾಗೂ 305 ಗ್ರಾಂ ಬೆಳ್ಳಿ ಸಾಮಾನು ಮತ್ತು ಮನೆಯ ಯಜಮಾನಿ ಭರಮವ್ವ ತರಕಾರಿ ಮಾರಿ ಬಂದ ಮತ್ತು ಗೃಹಲಕ್ಷ್ಮಿ ಹಣ ಕೂಡಿಟ್ಟ ಹುಂಡಿಯನ್ನು ₹40 ಸಾವಿರ ಕದ್ದೊಯ್ದಿದ್ದಾರೆ.
ಇದೇ ಓಣಿಯಲ್ಲಿನ ಬೋರಮ್ಮ ಭಜಂತ್ರಿ 5ಗ್ರಾಂ ಚಿನ್ನ, ₹20 ಸಾವಿರ ನಗದು ದೋಚಿದ್ದು, ಗ್ಯಾನಪ್ಪ ಪೂಜಾರಿ, ಯಲ್ಲವ್ವ ಪಾತ್ರೋಟಿ ಹಾಗೂ ಮಹಿಬೂ ಗುರಗುನ್ನಿ ಎಂಬವರ ಮನೆಗಳ ಬೀಗ ಮುರಿದಿರುವ ಕಳ್ಳರು ಮನೆಯೊಳಗೆ ಜಾಲಾಡಿದ್ದಾರಾದರೂ ಯಾವುದೇ ವಸ್ತುಗಳನ್ನು ಕದ್ದಿಲ್ಲ.
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸುರೇಶ ವೆರ್ಣೇಕರ ಹಾಗೂ ವಿಠ್ಠಲ ಹೊದ್ಲೂರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಶ್ವಾನದಳ, ಬೆರಳಚ್ಚು ತಜ್ಞರನ್ನು ತರಿಸಲಾಗಿತ್ತು. ಪಿಎಸ್ಐ ಗಿರೀಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.