ADVERTISEMENT

ಸಾಂಗಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ: ಅರಿಸಿನ ಬೀಜಕ್ಕೆ ಭಾರಿ ಬೇಡಿಕೆ

₹6,500 ರಿಂದ ₹ 6,800ಕ್ಕೆ ಬೀಜಗಳ ಮಾರಾಟ

ವಿಶ್ವಜ ಕಾಡದೇವರ
Published 18 ಏಪ್ರಿಲ್ 2025, 5:54 IST
Last Updated 18 ಏಪ್ರಿಲ್ 2025, 5:54 IST
ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ತೋಟವೊಂದರಲ್ಲಿ ಅರಿಸಿನ ಬೀಜಗಳನ್ನು ಮಾರಾಟ ಮಾಡುತ್ತಿರುವುದು
ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ತೋಟವೊಂದರಲ್ಲಿ ಅರಿಸಿನ ಬೀಜಗಳನ್ನು ಮಾರಾಟ ಮಾಡುತ್ತಿರುವುದು   

ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ಅರಿಸಿನಕ್ಕೆ ಭಾರಿ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರಬಕವಿ ಬನಹಟ್ಟಿ, ಜಮಖಂಡಿ, ಮುಧೋಳ ಮತ್ತು ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ಗೋಕಾಕ ತಾಲ್ಲೂಕಿನ ಹಲವು ರೈತರು ಅರಿಸಿನ ಬೆಳೆಯಲು ಮುಂದಾಗಿದ್ದಾರೆ.

ನೆರೆಯ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ಈ ಋತುವಿನಲ್ಲಿ ₹13 ರಿಂದ ₹ 20 ಸಾವಿರದವರೆಗೆ ಒಂದು ಕ್ವಿಂಟಲ್ ಅರಿಸಿನ ಮಾರಾಟಗೊಂಡಿತ್ತು. ಹೀಗಾಗಿ ರೈತರು ಅರಿಸಿನ ಬೆಳೆಯಲು ಮುಂದಾಗಿದ್ದಾರೆ.

ಈ ಭಾಗದಲ್ಲಿ ರೈತರು ಅರಿಸಿನ ನಾಟಿ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಹದಿನೈದು ದಿನಗಳಿಂದ ಅರಿಸಿನ ಬೀಜಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಆರಂಭದಲ್ಲಿ ಉತ್ತಮ ಗುಣಮಟ್ಟದ ‘ಚಿನ್ನಾ ಸೇಲಂ’ ಅರಿಸಿನ ಬೀಜಗಳು ಒಂದು ಕ್ವಿಂಟಲ್‌ಗೆ ₹4,500ಕ್ಕೆ ಮಾರಾಟವಾಗುತ್ತಿತ್ತು. ಸದ್ಯ ₹6,500 ರಿಂದ ₹6,800ಕ್ಕೆ ಮಾರಾಟವಾಗುತ್ತಿವೆ.

ADVERTISEMENT

ಕೊಯಮುತ್ತೂರಿನಲ್ಲಿರುವ ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಭಿವೃದ್ಧಿ ಮಾಡಿರುವ C0 1 ಅರಿಸಿನ ಬೀಜ ಇದಾಗಿದ್ದು, ಇದನ್ನು ಚಿನ್ನಾ ಸೇಲಂ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಮತ್ತೆ ನಾಂದೇಡ್ ಸೇಲಂ ಮತ್ತು ಎರೋಡ ಸೇಲಂ ಬೀಜಗಳು ದೊರೆಯುತ್ತವೆ. ಇವುಗಳ ಬೆಲೆ ಚಿನ್ನಾ ಸೇಲಂ ಬೆಲೆಗಿಂತ ಅಂದಾಜು ₹750 ರಿಂದ ₹ 1,000 ಕಡಿಮೆಯಾಗಿದೆ.

ಚಿನ್ನಾ ಸೇಲಂ ಅರಿಸಿನ ಬೀಜಗಳಿಂದ ಉತ್ತಮ ಇಳುವರಿ ಪಡೆದುಕೊಳ್ಳಬಹುದು, ಒಂದು ಎಕರೆ ಭೂ ಪ್ರದೇಶದಲ್ಲಿ ಉತ್ತಮ ರೀತಿಯಾಗಿ ಬೆಳೆದ ಬೆಳೆಯಿಂದ ಅಂದಾಜು 35 ರಿಂದ 40 ಕ್ವಿಂಟಲ್ ಬೆಲೆ ಪಡೆಯಬಹುದು. ಅದೇ ರೀತಿ ಒಂದು ಎಕರೆಗೆ 12 ರಿಂದ 14 ಕ್ವಿಂಟಲ್‌ವರೆಗೆ ಬೀಜಗಳನ್ನು ನಾಟಿ ಮಾಡಲಾಗುತ್ತದೆ.

‘ಸದ್ಯ ಕೊಯಮುತ್ತೂರಿನಲ್ಲಿ ಚಿನ್ನಾ ಸೇಲಂ ಬೀಜಗಳ ಕೊರತೆ ಇದ್ದು, ರೈತರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಪೂರೈಕೆ ಕೂಡ ಕಡಿಮೆಯಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆಯೂ ಹೆಚ್ಚಾಗುತ್ತಿದೆ. ಕಳೆದ ಬಾರಿ ಅರಿಸಿನ ಬೆಳೆಗೆ ರೋಗ ಕಾಣಿಸಿಕೊಂಡಿದ್ದು,ಇಳುವರಿ ಕಡಿಮೆಯಾಗಿತ್ತು. ಆದ್ದರಿಂದ ರೈತರು ಹೊಸ ಬೀಜಗಳನ್ನು ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅರಿಸಿನ ಬೀಜಗಳ ಮಾರಾಟಗಾರ ದೇವರಾಜ ರಾಠಿ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ, ಜಮಖಂಡಿ, ಬೆಳಗಾವಿ ಜಿಲ್ಲೆಯ ರಾಯಬಾಗ, ಕಂಕಣವಾಡಿ, ಘಟಪ್ರಭಾ, ಚಿಂಚಲಿ, ಪಾಮಲದಿನ್ನಿ, ಜಾಂಗನೂರ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶದ ರೈತರು ಇಲ್ಲಿಗೆ ಬಂದು ಅರಿಸಿನ ಬೀಜಗಳನ್ನು ಖರೀದಿ ಮಾಡುತ್ತಿದ್ದಾರೆ.

ಇಲ್ಲಿ ದೊರೆಯುವ ಅರಿಸಿನ ಬೀಜಗಳು ಗುಣಮಟ್ಟದಾಗಿದ್ದು ಇಲ್ಲಿಗೆ ಬಂದು ಬೀಜಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ
–ರಾಮಚಂದ್ರ ಮರಾಠೆ ರೈತ ಪಾಮಲದಿನ್ನಿ ರಾಯಬಾಗ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.