ಬಾಗಲಕೋಟೆ: ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಒಂದೆರಡು ತಾಲ್ಲೂಕಿನಲ್ಲಿ ಕಡಿಮೆಯಾಗಿದೆ. ಆದರೂ ಬಿತ್ತನೆಗೆ ತೊಡಕಾಗಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಜಿಲ್ಲೆಯ ಕೃಷ್ಣಾ ನದಿ ತೀರದ ಜನರ ಎದೆಬಡಿತ ಹೆಚ್ಚಿಸುತ್ತದೆ.
ಮಹಾರಾಷ್ಟ್ರದಲ್ಲಿ ಜೋರಾದ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಜೊತೆಗೆ ಘಟಪ್ರಭಾ, ಮಲಪ್ರಭಾ ಜಲಾಯಶಗಳಿಗೂ ನೀರಿನ ಹರಿವು ಹೆಚ್ಚಿದೆ. ಮಹಾರಾಷ್ಟ್ರದ ಜತೆಗೆ ರಾಜ್ಯದ ನೀರೂ ಸೇರಿಕೊಂಡಿರುವುದರಿಂದ ಕೃಷ್ಣಾ ನದಿ ತುಂಬಿ ತುಳುಕುತ್ತಿದೆ. ಘಟಪ್ರಭಾ, ಮಲಪ್ರಭಾ ಜಲಾಶಯಗಳು ತುಂಬಿಲ್ಲದಿರುವುದರಿಂದ ಸದ್ಯಕ್ಕೆ ಅಲ್ಲಿ ಪ್ರವಾಹದ ಪರಿಸ್ಥಿತಿ ಇಲ್ಲ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ಚುತ್ತಿದ್ದು, ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನದಿ ತೀರದ ಜನರು ಜಾಸ್ತಿ ಎಚ್ಚರ ವಹಿಸಬೇಕಾಗಿದೆ. ಪ್ರವಾಹ ಎದುರಿಸಲು ಜಿಲ್ಲಾಡಳಿತವೂ ಹಲವಾರು ಕ್ರಮಗಳನ್ನು ಕೈಗೊಂಡಿದೆ.
2019ರಲ್ಲಿ ಉಂಟಾದ ಪ್ರವಾಹವು ಇಂದಿಗೂ ಹಲವಾರು ಹಳ್ಳಿಗಳ ಜನರನ್ನು ಅತಂತ್ರರನ್ನಾಗಿಸಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ತುಂಬಿ ಹರಿದಿದ್ದರಿಂದ ನೂರಾರು ಹಳ್ಳಿಗಳು ಮುಳುಗಡೆಯಾಗಿದ್ದವು. ಅವುಗಳಲ್ಲಿ ಕೆಲವು ಗ್ರಾಮಗಳ ಜನರಿಗೆ ಬೇರೆಡೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆಯಾದರೂ, ಮೂಲ ಸೌಲಭ್ಯಗಳಿಲ್ಲದ ಕಾರಣ ಜನರು ಪರದಾಡುತ್ತಿದ್ದಾರೆ.
ಆಗ ಉಂಟಾಗಿದ್ದ ಪ್ರವಾಹದಿಂದ ಗ್ರಾಮಗಳು ಮುಳುಗಡೆಯಾಗಿದ್ದಲ್ಲದೇ, ಸಾವಿರಾರು ಕೋಟಿ ಮೊತ್ತದ ಬೆಳೆ ನಾಶವಾಗಿತ್ತು. ಸೇತುವೆ, ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದವು. 203 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದವು.
ಕೃಷ್ಣಾ ನದಿಯಲ್ಲಿ 20 ಸಾವಿರ ಕ್ಯುಸೆಕ್‌ನಿಂದ ಆರಂಭವಾದ ಒಳಹರಿವಿನ ಪ್ರಮಾಣ ಈಗ ಲಕ್ಷದ ಗಡಿ ದಾಟಿ 1.25 ಲಕ್ಷ ಕ್ಯುಸೆಕ್ ತಲುಪಿದೆ. ಆಲಮಟ್ಟಿ ಜಲಾಶಯ ಭರ್ತಿ ಹಂತ ತಲುಪಿರುವುದರಿಂದ ಅಷ್ಟೇ ಪ್ರಮಾಣ ನೀರನ್ನು ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯುಸೆಕ್ ನೀರು ಬಂದರಷ್ಟೇ ಗ್ರಾಮಗಳಿಗೆ ನೀರು ನುಗ್ಗಲಿದೆ.
ಘಟಪ್ರಭಾ ನದಿಗೆ ನಿರ್ಮಿಸಿರುವ ಹಿಡಕಲ್ ಜಲಾಶಯಕ್ಕೆ 29 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಾಗೆಯೇ ಮಲಪ್ರಭಾ ನದಿಗೂ 15 ಸಾವಿರ ಕ್ಯುಸೆಕ್‌ನಷ್ಟು ನೀರು ಬರುತ್ತಿದೆ. ಎರಡೂ ಜಲಾಶಯಗಳು ಭರ್ತಿಯಾಗದಿರುವುದರಿಂದ ಹೊರ ಹರಿವಿನ ಪ್ರಮಾಣ ಬಹಳ ಕಡಿಮೆ ಇದೆ. ಘಟಪ್ರಭಾದಲ್ಲಿ 50 ಸಾವಿರಕ್ಕೂ ಹೆಚ್ಚು ಕ್ಯುಸೆಕ್, ಮಲಪ್ರಭಾದಲ್ಲಿ 32 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬಂದರೆ ಪ್ರವಾಹ ಪರಿಸ್ಥಿತಿ ಎದುರಾಗಲಿದೆ.
ಸದ್ಯಕ್ಕೆ ಪ್ರವಾಹ ಸಮಸ್ಯೆ ಎದುರಾಗಿಲ್ಲ. ಜಿಲ್ಲಾಡಳಿತ ಪ್ರವಾಹ ಎದುರಿಸಲು ಅವಶ್ಯಕ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳಿಗೆ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಲಾಗಿದೆಜಾನಕಿ ಕೆ.ಎಂ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.