ADVERTISEMENT

ಬಾದಾಮಿ ದತ್ತು: ಮಾತಿನಲ್ಲಿಯೇ ಉಳಿದ ಮುಖ್ಯಮಂತ್ರಿ ಭರವಸೆ

ಎಸ್.ಎಂ.ಹಿರೇಮಠ
Published 14 ಡಿಸೆಂಬರ್ 2024, 5:50 IST
Last Updated 14 ಡಿಸೆಂಬರ್ 2024, 5:50 IST
<div class="paragraphs"><p>ಬಾದಾಮಿ ಅಗಸ್ತ್ಯತೀರ್ಥ ಹೊಂಡದ ದಂಡೆಯಲ್ಲಿ ಸ್ಥಳಾಂತರಕ್ಕೆ ಕಾದಿರುವ ಮನೆಗಳು</p></div>

ಬಾದಾಮಿ ಅಗಸ್ತ್ಯತೀರ್ಥ ಹೊಂಡದ ದಂಡೆಯಲ್ಲಿ ಸ್ಥಳಾಂತರಕ್ಕೆ ಕಾದಿರುವ ಮನೆಗಳು

   

ಬಾದಾಮಿ: 250 ವರ್ಷಗಳ ಕಾಲ ಗತವೈಭವದ ಸಾಮ್ರಾಜ್ಯವನ್ನಾಳಿದ ಉತ್ತರ ಕರ್ನಾಟಕದ ಚಾಲುಕ್ಯರ ಪ್ರವಾಸಿ ತಾಣಗಳು ಅಭಿವೃದ್ಧಿಯಾದಾವೇ? ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಅನೇಕ ದಶಕಗಳಿಂದ ದಾರಿ ಕಾಯುತ್ತಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವ ಕುರಿತು ಜನಪ್ರತಿನಿಧಿಗಳು ಮಾಧ್ಯಮದಲ್ಲಿ ತಿಳಿಸಿದಂತೆ ಉತ್ತರ ಕರ್ನಾಟಕದ ಚಾಲುಕ್ಯರ ನಾಡಿನ ಜನತೆಗೆ ರೆಕ್ಕೆಪುಕ್ಕ ಬಂದಂತಾಗಿದೆ. ಪ್ರವಾಸಿ ತಾಣಗಳು ಅಭಿವೃದ್ದಿ ಯಾದಾವೇ? ಪ್ರವಾಸಿಗರಿಗೆ ಮೂಲ ಸೌಲಭ್ಯಗಳು ದಕ್ಕಿಯಾವೇ ಎಂದು ಯೋಚಿಸತೊಡಗಿದ್ದಾರೆ.

ADVERTISEMENT

ಚಾಲುಕ್ಯರು ಬಾದಾಮಿ, ಪಟ್ಟದಕಲ್ಲು, ಮಹಾಕೂಟ, ಐಹೊಳೆ, ಹುಲಿಗೆಮ್ಮನಕೊಳ್ಳ, ನಾಗನಾಥಕೊಳ್ಳ ಮುಂತಾದ ಸ್ಥಳಗಳ ನೂರಾರು ಸ್ಮಾರಕಗಳಲ್ಲಿ ಮೂರ್ತಿ ಶಿಲ್ಪ ಕಲೆ, ಶಾಸನ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಶ್ವಕ್ಕೆ ಬಿಟ್ಟು ಹೋಗಿದ್ದಾರೆ.

ಐಹೊಳೆ ಶಿಲ್ಪ ಕಲಾ ಪ್ರಯೋಗ ಶಾಲೆಯಾದರೆ ಪಟ್ಟದಕಲ್ಲು ಶಿಲ್ಪಕಲೆಯ ತೊಟ್ಟಿಲಾಗಿ ವಿಶ್ವಪರಂಪರೆಯ ಸ್ಥಳವಾಗಿದೆ. 2013 ರಲ್ಲಿಯೇ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಐಹೊಳೆ ಸ್ಥಳಾಂತರ ಬಗ್ಗೆ ಹೇಳಿದ್ದರು. ಪ್ರವಾಸೋದ್ಯಮ ಸಚಿವ ಕೆ.ಎಚ್.ಪಾಟೀಲ ಈಚೆಗೆ ಭೇಟಿ ನೀಡಿ ಸ್ಥಳಾಂತರದ ಬಗ್ಗೆ ಭರವಸೆ ನೀಡಿದ್ದಾರೆ ಕಾದು ನೋಡಬೇಕಿದೆ.

ಪ್ರವಾಸಿಗರಿಗೆ ಅನುಕೂಲತೆ ಕಲ್ಪಿಸಲು ಸರ್ಕಾರ ಪಟ್ಟದಕಲ್ಲಿನಲ್ಲಿ ಟೂರಿಸ್ಟ್ ಪ್ಲಾಜಾ ಹೋಟೆಲ್ ಕಟ್ಟಡ, ಬನಶಂಕರಿಯ ಸ್ಟಾರ್ ಹೋಟೆಲ್ ಕಟ್ಟಡ ಅರ್ಧಕ್ಕೆ ನಿಂತಿವೆ. ಪಟ್ಟದಕಲ್ಲಿನಲ್ಲಿ ಅಭಿವೃದ್ಧಿಯಾಗದ ಪ್ರವಾಸೋದ್ಯಮದ ಪಾರ್ಕಿಂಗ್ ನಿವೇಶನ ಖಾಲಿ ಇದೆ. ಬಾದಾಮಿ ಪಾರ್ಕಿಂಗ್ ಪ್ಲಾಜಾ, ಅಗಸ್ತ್ಯತೀರ್ಥ ಹೊಂಡದ ಪಕ್ಕದ 96 ಮನೆಗಳ ಸ್ಥಳಾಂತರ, ಮ್ಯುಜಿಯಂ ರಸ್ತೆ, ದಶಕಗಳಿಂದ ಸ್ಥಗಿತಗೊಂಡ ಚಾಲುಕ್ಯ ಉತ್ಸವ, ಮಲಪ್ರಭಾ ನದಿ ದಂಡೆಯ ಸ್ಥಳಾಂತರದ ಗ್ರಾಮಗಳಿಗೆ ಮೂಲ ಸೌಕರ್ಯ, ಮಿನಿ ವಿಧಾನ ಸೌಧ ಕಟ್ಟಡ, ಬನಶಂಕರಿಯಲ್ಲಿರುವ ಕನ್ನಡ ಹಂಪಿ ವಿಶ್ವವಿದ್ಯಾಲಯದ ಶಿಲ್ಪಕಲಾ ಕೇಂದ್ರದ ಕಟ್ಟಡಕ್ಕೆ ಅನುದಾನ ಹೀಗೆ ಅನೇಕ ಸಮಸ್ಯೆಗಳ ಆಗರದಿಂದ ಪ್ರವಾಸಿ ತಾಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.

ಸ್ಥಳೀಯ ಸಂಘ ಸಂಸ್ಥೆಗಳು ಹೋರಾಟ, ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಅನುದಾನ ಬಾರದಂತಾಗಿದೆ. ಪ್ರವಾಸಿಗರು ಜನಪ್ರತಿ ನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಶಪಿಸಿ ಹೋಗುವಂತಾಗಿದೆ.

ಬಾದಾಮಿ ಮೇಣಬಸದಿ ಮತ್ತು ಪಟ್ಟದಕಲ್ಲಿನಲ್ಲಿ ಮೊದಲು ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವನ್ನು ಕೊಡಬೇಕಿದೆ. ನವೆಂಬರ್, ಡಿಸೆಂಬರ ಮತ್ತು ಜನವರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಬರುತ್ತವೆ. ವಾಹನ ನಿಲ್ಲಿಸಲು ಜಾಗವಿಲ್ಲದೇ ಚಾಲಕರು ಮತ್ತು ಪ್ರವಾಸಿಗರು ಪರದಾಡುತ್ತಿದ್ದಾರೆ. ಸ್ಮಾರಕಗಳಿಗೆ ಹೋಗಲು ಪಟ್ಟಣದ ರಸ್ತೆ ಮಧ್ಯದಲ್ಲಿಯೇ ಹೋಗಬೇಕು ಪಟ್ಟಣದ 23 ವಾರ್ಡ್‌ಗಳಲ್ಲಿ ಮೂರು-ನಾಲ್ಕು ವರ್ಷಗಳಿಂದ ಸಿಸಿ ರಸ್ತೆಗಳು ಹದಗೆಟ್ಟು ಗುಂಡಿ ರಸ್ತೆಗಳಾಗಿವೆ.

ಚುನಾವಣೆ ಪ್ರಚಾರ ಸಮಯದಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನಗೆ ರಾಜಕೀಯಕ್ಕೆ ಪುನರ್ಜನ್ಮ ನೀಡಿದ ಬಾದಾಮಿ ಮತಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವೆ, ಭೀಮಸೇನ ಚಿಮ್ಮನಕಟ್ಟಿಗೆ ಮತ ಹಾಕಿದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದನ್ನು ಜನರು ನೆನಪಿಸಿಕೊಳ್ಳುವರು.

ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಯಾಗಿದ್ದಾರೆ. ಅಂದು ಸಾರ್ವಜನಿಕ ಸಮಾರಂಭದಲ್ಲಿ ಸಿದ್ದರಾಮಯ್ಯ ಹೇಳಿದ ಮಾತನ್ನು ಉಳಿಸಿಕೊಳ್ಳಲು ಕ್ಷೇತ್ರದ ಅಭಿವೃದ್ಧಿಗೆ ಏನಾದರೂ ಹೆಚ್ಚಿನ ಅನುದಾನ ಕೊಡಬಹುದೇ ಎಂದು ಜನತೆ ನಿರೀಕ್ಷೆಯಲ್ಲಿದ್ದಾರೆ.

‘ಸಿದ್ದರಾಮಯ್ಯಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮತ್ತು ಪ್ರವಾಸಿ ತಾಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುದಾನಕ್ಕೆ ನಾನೇ ಒತ್ತಾಯಿಸುವೆ ’ ಎಂದು ಈಚೆಗೆ ಬಾದಾಮಿಗೆ ಬಂದಿದ್ದ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದನ್ನು ನೆನಪಿಸಬಹುದು.

‘ಉತ್ತರ ಕರ್ನಾಟಕದ ಚಾಲುಕ್ಯರ ಪ್ರವಾಸಿ ತಾಣಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಅಭಿವೃದ್ಧಿ ಕಾಣದೆ ಪ್ರವಾಸಿಗರು ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಗರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಅನೇಕ ಮನವಿ ಕೊಡಲಾಗಿದೆ. ಪ್ರವಾಸಿ ತಾಣ ಅಭಿವೃದ್ಧಿಯಾದರೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲಿವೆ  ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು
ಎಸ್.ಎಚ್.ವಾಸನ, ಅಧ್ಯಕ್ಷ, ನಿಸರ್ಗ ಬಳಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.