ADVERTISEMENT

ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ತೇರದಾಳ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮುಖ್ಯ ಶಿಕ್ಷಕರ ಕ್ರಮ

ಅಮರ್ ಎ.ಇಂಗಳೆ
Published 13 ಫೆಬ್ರುವರಿ 2026, 4:42 IST
Last Updated 13 ಫೆಬ್ರುವರಿ 2026, 4:42 IST
<div class="paragraphs"><p>ಸೆಕ್ಯುರಿಟಿ ಗಾರ್ಡ್‌</p></div>

ಸೆಕ್ಯುರಿಟಿ ಗಾರ್ಡ್‌

   

ತೇರದಾಳ: ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪಾಠ ಬೋಧನೆಗಿಂತ ಇತರ ಕೆಲಸಗಳ ಭಾರ ಹೆಚ್ಚಿವೆ. ಹೀಗಿದ್ದೂ ಶಾಲಾ ಆವರಣ ಶುಚಿಗೊಳಿಸಲು, ಶೌಚಾಲಯ ಶುಚಿತ್ವ ಕಾಪಾಡಲು ಮಕ್ಕಳನ್ನು ಬಳಸಿದರೆ ತಪ್ಪಾಗುತ್ತದೆ. ಹಾಗಂತ ಶಿಕ್ಷಕರೂ ಈ ಕಾರ್ಯ ಮಾಡುವುದು ಅಸಾಧ್ಯ. ಹೀಗಾಗಿ ತೇರದಾಳದ ಶಾಲೆಯೊಂದಕ್ಕೆ ಅಲ್ಲಿನ ಮುಖ್ಯ ಶಿಕ್ಷಕರು, ಸೆಕ್ಯುರಿಟಿ ಗಾರ್ಡ್‌ ನೇಮಿಸಿದ್ದಾರೆ.

ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮಾರುಕಟ್ಟೆಯ ಮಧ್ಯದಲ್ಲಿಯೇ ಇದೆ. ಹೀಗಾಗಿ ಅವರಿವರು ಶಾಲಾ ಆವರಣದೊಳಗೆ ಬಂದು ಹೋಗುವುದು ಸಾಮಾನ್ಯ
ವಾಗಿತ್ತು. ಅದು ಹೇಳಿ ಕೇಳಿ ಹೆಣ್ಣುಮಕ್ಕಳ ಶಾಲೆ. ಬಾಲಕರ ಶಾಲೆಯೊಂದಿಗೆ ವಿಲೀನವಾಗಿದ್ದರೂ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ.  ಇದೇ ಆವರಣದಲ್ಲಿನ ಕಟ್ಟಡದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಕೂಡ ಆರಂಭವಾಗಿದೆ. ಇಲ್ಲಿನ ಮಕ್ಕಳ ರಕ್ಷಣೆ ಜೊತೆಗೆ ಶಾಲೆ ಸ್ವಚ್ಛವಾಗಿಡಲು ಒಬ್ಬ ಕೆಲಸಗಾರನ ಅವಶ್ಯಕತೆಯಿತ್ತು. ಆದರೆ ಸರ್ಕಾರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಇದಕ್ಕೆ ಅವಕಾಶ ಇಲ್ಲದ್ದನ್ನು ಮನಗಂಡು ಶಾಲಾ ಮುಖ್ಯ ಶಿಕ್ಷಕ ಕೆ.ಡಿ.ಮಾಲಗಾಂವಿ ತಮ್ಮ ಸ್ವಂತ ಹಣದಿಂದ ಭರಮಪ್ಪ ಶೇಡಬಾಳ ಅವರನ್ನು ಪ್ರತಿ ತಿಂಗಳು ವೇತನ ನೀಡುವ ಭರವಸೆ ನೀಡಿ ಕೆಲಸಕ್ಕೆ ನೇಮಿಸಿದ್ದಾರೆ.

ADVERTISEMENT

ಇದರಿಂದ ಇದೇ ಆವರಣದ ಕೊನೆಯಲ್ಲಿರುವ ಅಂಗನವಾಡಿ ಮಕ್ಕಳನ್ನು ಕರೆಯಲು ಬರುತ್ತಿದ್ದ ಪಾಲಕರ ಬೈಕ್, ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡುವ ಬೈಕ್ ಸವಾರರ ಉಪಟಳ ತಪ್ಪಿದೆ. ಇವರು ಶಾಲಾ ಆವರಣ ಕಾಯುವುದು ಮಾತ್ರವಲ್ಲ. ಶೌಚಾಲಯ ಶುಚಿಗೊಳಿಸುವ ಕಾರ್ಯವನ್ನೂ ಮಾಡುತ್ತಾರೆ. 

ರಕ್ಷಣಾ ಸಿಬ್ಬಂದಿ ಗೇಟ್ ಬಳಿ ಕುಳಿತಿದ್ದನ್ನು ಕಂಡರೆ ಇದ್ಯಾವುದೋ ಖಾಸಗಿ ಶಾಲೆ ಇರಬೇಕೆಂಬ ಭಾವನೆ ಬರುತ್ತದೆ. ರಕ್ಷಣಾ ಸಿಬ್ಬಂದಿಗೆ ಚಂದ್ರು ಎಂಬವರು ಸೆಕ್ಯುರಿಟಿ ಸಮವಸ್ತ್ರ, ಟೋಪಿಯನ್ನು ಕಾಣಿಕೆಯಾಗಿ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಅವರು ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಕೆ.ಡಿ. ಮಾಲಗಾಂವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.