ADVERTISEMENT

ಗುಳೇದಗುಡ್ಡ | ಕೊನೆಗೂ ಬೋನಿಗೆ ಬಿದ್ದ ಮಂಗ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:28 IST
Last Updated 11 ಅಕ್ಟೋಬರ್ 2025, 2:28 IST
ಮಂಗನಿಂದ ಗಾಯಗೊಂಡವರು
ಮಂಗನಿಂದ ಗಾಯಗೊಂಡವರು   

ಗುಳೇದಗುಡ್ಡ : ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ 45 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದ ಕೋತಿಯನ್ನು  ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಗದಗದ ಪ್ರಾಣಿ ಸಂಗ್ರಹಾಲಯದ ಪಶುವೈದ್ಯಾಧಿಕಾರಿ ಡಾ.ಪವಿತ್ರಾ ರೇವಡಿ, ನಿಖಿಲ ಕುಲಕರ್ಣಿ ಅವರು ಕೋತಿಗೆ ಅರಿವಳಿಕೆ ನೀಡಿದ ಬಳಿಕ ಅದನ್ನು ಸೆರೆ ಹಿಡಿಯಲಾಯಿತು. ಅರಣ್ಯ ಅಧಿಕಾರಿ ಮಹೇಶ ಮರೆಣ್ಣವರ ತಂಡ  ಕೋತಿಯನ್ನು ಸೆರೆಹಿಡಿದಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿಬಿಟ್ಟರು.

ಬುಧವಾರದಿಂದಲೇ ಮಂಗವೊಂದು ಪಟ್ಟಣದ ಬಾಗವಾನ ಪೇಟೆ, ಹೊಸಪೇಟೆ ಬಡಾವಣೆ, ಭಂಡಾರಿ ಕಾಲೇಜ್ ಸರ್ಕಲ್, ಹರದೊಳ್ಳಿ ಹೀಗೆ ಕೆಲ ಸ್ಥಳಗಳಲ್ಲಿ ನಿರಂತರ ಉಪಟಳ ನೀಡಿ, ಜನರನ್ನು ಗಾಯಗೊಳಿಸಿ, ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮಾಡಿದೆ. ಕುತ್ತಿಗೆ, ಕೈ, ಬೆನ್ನು, ಕಾಲು ಹೀಗೆ ದೇಹದ ವಿವಿಧೆಡೆ ಮನ ಬಂದಂತೆ ಕಚ್ಚಿ ಗಾಸಿಗೊಳಿಸಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ ಎಂದಿನಂತೆ 6 ಗಂಟೆ ಸುಮಾರಿಗೆ ಕಾಲೇಜ ಸರ್ಕಲ್‌ ಹತ್ತಿರ ಪತ್ರಿಕ ವಿತರಣೆ ಮಾಡುತ್ತಿದ್ದ ಪತ್ರಕರ್ತ ಎಚ್.ಎಸ್.ಘಂಟಿ ಅವರ ಮೇಲೆ ಮಂಗ ದಾಳಿ ಮಾಡಿ ಕಚ್ಚಿದೆ. ಪತ್ರಿಕೆಗಳ ವಿತರಣೆ ಮಾಡುತ್ತಿದ್ದ ಶಂಕರ ಗಣಾಚಾರಿ, ಗುಂಡಪ್ಪ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಮಂಗ ದಾಳಿ ಮಾಡಿದ್ದರ ಪರಿಣಾಮವಾಗಿ ಗಂಭೀರ ಗಾಯಗಳಾಗಿವೆ.

ಬುಧವಾರದಿಂದ ಮಂಗ ಕಚ್ಚಿದ ಪ್ರಕರಣಗಳು ಕಂಡು ಬಂದವು. ಅಂದೇ ಸಂಬಂಧಪಟ್ಟ ಇಲಾಖೆಯವರು ಕಾರ್ಯಾಚರಣೆ ಮಾಡಿ ಮಂಗನನ್ನು ಸೆರೆ ಹಿಡಿದಿದ್ದರೆ ಸುಮಾರು 40 ರಷ್ಟು ಜನರನ್ನು ರಕ್ಷಿಸಿದಂತಾಗುತ್ತಿತ್ತು ಎನ್ನುತ್ತಾರೆ  ಹೊಸಪೇಟ ಓಣಿಯ ವಿಶ್ರಾಂತ ಶಿಕ್ಷಕ ಮಲ್ಲಿಕಾರ್ಜುನ ರಾಜನಾಳ ಅವರು.

ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಸುಮಾರು 18-20 ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಮೆಡಿಷನ್ ನಮ್ಮಲ್ಲಿ ಸಂಗ್ರಹವಿತ್ತು. ನಿನ್ನೆ ರೆಬಿಸ್ ಹಿಮಲೋಗ್ಲೋಬಿನ್ ಇಂಜಕ್ಷನ್ ತರಿಸಿಕೊಂಡಿದ್ದೇವೆ.
ಡಾ. ನಾಗರಾಜ ಕುರಿ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ, ಗುಳೇದಗುಡ್ಡ
ಮಂಗನ ಹಾವಳಿಯಿಂದ ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿದ್ದು ನಮಗೂ ನೋವು ತಂದಿದೆ. ಮೇಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಮಂಗನ ಹಾವಳಿಗೆ ಗಾಯಗೊಂಡವರಿಗೆ ಸರ್ಕಾರದಿಂದ ಬರುವ ಸಹಾಯಕ್ಕೆ ಪ್ರಯತ್ನಿಸುವೆ
ಮಹೇಶ ಮರೆಣ್ಣವರ್ ವಲಯ ಅರಣ್ಯಾಧಿಕಾರಿ, ಬಾದಾಮಿ
ಮಂಗನಿಂದ ಗಾಯಗೊಂಡವರು
ಕೋತಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.