ರಬಕವಿ–ಬನಹಟ್ಟಿ: ಸುತ್ತ ಮುತ್ತಲಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆ ನಂತರ ಬರುವ ನಾಲ್ಕು ಮಂಗಳವಾರದಂದು ಪ್ರತಿ ಮನೆಯಲ್ಲಿಇಳೆ ಹೊತ್ತಿನಲ್ಲಿ ಗುಳ್ಳವ್ವನ ಪೂಜೆ ನಡೆಯುತ್ತದೆ. ಗುಳ್ಳವ್ವನ ಪೂಜೆಯ ಮೂಲಕ ಜನರು ಮಣ್ಣಿಗೆ ಸಲ್ಲಿಸುವ ಎರಡನೆಯ ಪೂಜೆಯಾಗಿದೆ.
ರಬಕವಿ ಮತ್ತು ಹೊಸೂರಿನ ಕುಂಬಾರರು ಪ್ರತಿವರ್ಷ ಸಾವಿರಾರು ಗುಳ್ಳವ್ವನ ಮೂರ್ತಿಗಳನ್ನು ಮನೆಯಲ್ಲಿ ನಿರ್ಮಾಣ ಮಾಡಿ ಮಾರಾಟ ಮಾಡುತ್ತಾರೆ.
ಜನರು ಮಂಗಳವಾರ ಗುಳ್ಳವ್ವನ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬಂದು ಗುಲಗಂಜಿ, ಗೋಧಿ ಮತ್ತು ಜೋಳದ ಕಾಳುಗಳಿಂದ ಗುಳ್ಳವ್ವನನ್ನು ಶೃಂಗಾರ ಮಾಡುತ್ತಾರೆ. ಪೂಜೆಯ ಸಂದರ್ಭದಲ್ಲಿ ಹಾವು, ಚೇಳುಗಳನ್ನು ಮಾಡುತ್ತಾರೆ. ಇವು ಗುಳ್ಳವ್ವನ (ಮಣ್ಣಿನ) ಮಕ್ಕಳು ಎಂಬುದು ರೈತ ಭಾವನೆಯಾಗಿದೆ.
ಕೋಣದ ಮೂರ್ತಿಯನ್ನು ಮಾಡಿ ಪೂಜಿಸುತ್ತಾರೆ. ಗುಳ್ಳವ್ವನ ಪೂಜೆಯ ನಂತರ ಸುತ್ತಲಿನ ಓಣಿಯಲ್ಲಿರುವ ಬಾಲಕಿಯರು ಮಣ್ಣಿನ ಆರತಿಯನ್ನು ಹಿಡಿದುಕೊಂಡು ಮನೆ ಮನೆಗೆ ತೆರಳಿ ಪೂಜೆ ಮಾಡಿದ ಗುಳ್ಳವ್ವನ ಸುತ್ತ ಕುಳಿತು ಹಾಡುಗಳನ್ನು ಹಾಡಿ ಆರತಿಯನ್ನು ಬೆಳಗುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡುಗಳು ಕೂಡಾ ವಿಶೇಷವಾಗಿವೆ.
ಗುಳ್ಳವ್ವ ಗುಳ್ಳವ್ವ ಎಂದ ಬರತೀ ಗುಳ‍್ಳವ್ವ,
ಗುಳೇದುಗುಡ್ಡಕ ಹೋಗಿ ಖಣಾ ತರತನ ಎಂದ ಬರತೀ ಗುಳ್ಳವ್ವ,
ಬಾಗಲಕೋಟೆಗೆ ಹೋಗಿ ಬಾಗಲಾ ತರತಿನಿ ಎಂದ ಬರತೀ ಗುಳ್ಳವ್ವ,
ಇಳಕಲ್ ಹೋಗಿ ಸೀರಿ ತರತನ, ಧಾರವಾಡಕ ಹೋಗಿ ಪೇಡೆ ತರತನ,
ಗೋಕಾಕ ಹೋಗಿ ಕರದಂಟ ತರತನ ಎಂದು ಪ್ರಾಸಬದ್ಧವಾಗಿ ನಾಲ್ಕಾರು ಹಾಡುಗಳನ್ನು ಹಾಡುತ್ತಾರೆ.
ಗುಳ್ಳವ್ವನಿಗೆ ಬೆಳಗಲು ಕುಂಬಾರರು ವಿಶೇಷವಾಗಿ ತಯಾರು ಮಾಡಿದ ಮಣ್ಣಿನ ಆರತಿಗಳನ್ನು ಬಳಸುತ್ತಾರೆ.
ಪ್ರತಿವಾರ ಅಂದಾಜು ಏಳು ನೂರು ಗುಳ್ಳವ್ವನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತೇವೆ. ಒಂದು ಗುಳ್ಳವ್ವನ ಮೂರ್ತಿಗೆ ₹ 15. ಇವುಗಳನ್ನು ನಿರ್ಮಾಣ ಮಾಡುವುದು ಕೂಡಾ ಕಷ್ಟದ ಕೆಲಸವಾಗಿದೆ. ಸಮೀಪದ ನದಿ ತೀರದಲ್ಲಿರುವ ಮಣ್ಣನ್ನು ತಂದು ಅದನ್ನು ಸ್ವಚ್ಛಗೊಳಿಸಿ ಹದಗೊಳಿಸಿ ಮತ್ತು ನೆಣೆ ಇಟ್ಟು ಸೋಮವಾರ ಸಂಜೆಯಿಂದ ಗುಳ್ಳವ್ವನ ಮೂರ್ತಿಗಳನ್ನು ಮಾಡಲು ತೊಡಗುತ್ತಾರೆ.
‘ರಬಕವಿಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕುಂಬಾರರ ಮನೆತನಗಳು ಇದ್ದರೂ. ಕೇವಲ ನಾಲ್ಕಾರು ಕುಟುಂಬಗಳು ಮಾತ್ರ ಗುಳ್ಳವ್ವನ ಮೂರ್ತಿಯನ್ನು ಮಾಡುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿಯ ಕುಂಬಾರ ಮನೆತನದ ಗಿರಿಜಾ ಕುಂಬಾರ. ಇವರ ಮಗ ಬಸಪ್ಪ ಕುಂಬಾರ ಮೂರು ತಲೆ ಮಾರುಗಳಿಂದ ನಡೆಸಿಕೊಂಡು ಬಂದಿರುವ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಸಮೀಪದ ಹೊಸೂರಿನ ಹತ್ತಾರು ಮನೆತನಗಳು ಗುಳ್ಳವ್ವನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಾರೆ. ಇಲ್ಲಿನ ಈರಪ್ಪ ಕುಂಬಾರ ನಿರಂತರವಾಗಿ ನಲವತ್ತು ವರ್ಷಗಳಿಂದ ಗುಳ್ಳವ್ವನ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಇಂದಿನ ಆಧುನಿಕ ದಿನಗಳಲ್ಲಿಯೂ ನಮ್ಮ ಜನರು ಗುಳ್ಳವ್ವನ ಪೂಜಿಸುವುದರ ಮೂಲಕ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ.
ರಬಕವಿಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕುಂಬಾರರ ಮನೆತನಗಳು ಇದ್ದರೂ. ಕೇವಲ ನಾಲ್ಕಾರು ಕುಟುಂಬ ಮಾತ್ರ ಗುಳ್ಳವ್ವನ ಮೂರ್ತಿ ಮಾಡುತ್ತಿದ್ದಾರೆ-ಗಿರಿಜಾ ಕುಂಬಾರ, ರಬಕವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.