ತೇರದಾಳ: ತಾಲ್ಲೂಕಿನ ಹನಗಂಡಿ ಗ್ರಾಮ ಪಂಚಾಯಿತಿಯು ಸಮರ್ಪಕ ಕಸ ವಿಲೇವಾರಿ ಮಾಡದ ಕಾರಣ ಗ್ರಾಮಸ್ಥರಿಂದ ಆಕ್ರೋಶ ಎದುರಿಸುತ್ತಿದೆ.
ಗ್ರಾಮದ ಮೂಲಕ ಹಾಯ್ದು ಹೋಗುವ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಬಳಿಯೇ ಸಾಕಷ್ಟು ಕಸ ಎಸೆಯುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.
ಗ್ರಾಮದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿಯ ತೇರದಾಳ ಕಡೆಗೆ ಹೊರಟ ರಸ್ತೆಯ ಎಡಗಡೆ ಅಂದಾಜು ನೂರರಿಂದ ಎರಡು ನೂರು ಅಡಿಗಳವರೆಗೆ ಚಹಾ ಅಂಗಡಿ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳನ್ನು ರಾಜಾರೋಷವಾಗಿ ಎಸೆಯಲಾಗುತ್ತಿದೆ. ಅಲ್ಲಿನ ತ್ಯಾಜ್ಯವೆಲ್ಲ ವಾಹನಗಳು ಓಡಾಡುವ ವೇಳೆ ಹೆದ್ದಾರಿ ಮೇಲೆಯೂ ಚದುರಿ ಬರುತ್ತಿದೆ. ಇದರಿಂದ ಸಾಕಷ್ಟು ಧೂಳಿನಿಂದ, ಮಳೆಗಾಲದಲ್ಲಿ ವಾಸನೆಯಿಂದ ಕೂಡಿದ್ದು ಅಲ್ಲಿನ ಸಂಚಾರಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ.
ಇದಲ್ಲದೇ ಗ್ರಾಮದ ಬಹುತೇಕ ಚರಂಡಿಗಳು ತುಂಬಿವೆ. ಅವುಗಳನ್ನು ಶುಚಿಗೊಳಿಸುವ ಕ್ರಮ ತೆಗೆದುಕೊಂಡಿಲ್ಲ ಎಂಬುದು ಮತ್ತೊಂದು ಪ್ರಮುಖ ಆರೋಪ.
ಗ್ರಾಮ ಪಂಚಾಯಿತಿ ಆವರಣ ಬಳಿಯಿರುವ ಚರಂಡಿ ತುಂಬಿ ನಿಂತಿರುವುದೇ ಇದಕ್ಕೆ ನಿದರ್ಶನ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗ್ರಾಮ ಹಾಗೂ ಜನಸಂಖ್ಯೆಗನುಗುಣವಾಗಿ ಸಮರ್ಪಕ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ, ಶೌಚಾಲಯ ನಿರ್ತಾಣದಂತ ಮೂಲ ಸೌಲಭ್ಯ ಓದಗಿಸಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಗ್ರಾಮದ ಬಡಾವಣೆಯ ರಸ್ತೆಗಳು, ನರೇಗಾ ಕಾಮಗಾರಿಯಡಿ ಕೈಗೊಂಡ ತೋಟದ ಕಾಮಗಾರಿಗಳು ಅಷ್ಟೊಂದು ತೃಪ್ತಿಕರವಾಗಿಲ್ಲ. ಗ್ರಾಮದ ಟಿಪ್ಪು ಸುಲ್ತಾನ್ ಸರ್ಕಲ್‌ನಿಂದ ಸರ್ಕಾರಿ ಪ್ರೌಢಶಾಲೆಗೆ ಹೊರಡುವ ರಸ್ತೆ ಬದಿ ನಿರ್ವಿಸಿರುವ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದರ ನೀರು ರಸ್ತೆಯ ಮಧ್ಯೆಯೆ ನಿಲ್ಲುತ್ತಿದೆ.
ಗ್ರಾಮದ ಹಲವು ಬಡಾವಣೆಗಳಲ್ಲಿ ಬೀದಿ ದೀಪ ಅಳವಡಿಸಿಲ್ಲ ಆಶ್ಚರ್ಯವೆಂದರೆ ವಿದ್ಯುತ್ ಕಂಬ ಅಳವಡಿಸಿಲ್ಲ. ಜಲಜೀವನ ಮಶಿನ್(ಜೆಜೆಎಮ್) ಯೋಜನೆ ಗ್ರಾಮದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ.
ಹನಗಂಡಿ ಗ್ರಾಮದಲ್ಲಿ ಸಮರ್ಪಕ ಬೀದಿ ದೀಪಗಳ ಅಳವಡಿಕೆಯಿಲ್ಲ. ಚರಂಡಿ ಸ್ವಚ್ಛತೆಯಿಲ್ಲ. ಅಧಿಕಾರಿ, ಜನಪ್ರತಿನಿಧಿಗಳು ಭೇಟಿ ನೀಡುವಾಗ ಮಾತ್ರ ಗ್ರಾಮ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ. ಒಂದೇ ದನಗಳ ಶೆಡ್ ನಿರ್ಮಾಣಕ್ಕೆ ಹಲವರು ಜಿಪಿಎಸ್ ಮಾಡಿಸಿಕೊಳ್ಳುವುದು ರೂಢಿಯಾಗಿದೆ.
’4 ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ನನ್ನಪತ್ನಿಯ ಹೆಸರು ಸೇರಿಸಿದ್ದು, ಅವರ ಹೆಸರಿನಲ್ಲಿ 8 ವರ್ಷದ ಹಿಂದೆಯೇ ಶೌಚಾಲಯದ ಬಿಲ್ ತೆಗೆಯಲಾಗಿದೆ. ಹೀಗೆ ಹತ್ತು ಹಲವು ದೋಷಗಳಿಂದ ಕೂಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರ ಕೈಗೊಂಬೆಯಂತೆ ವರ್ತಿಸುತಿದ್ದಾರೆ ಅಭಿವೃದ್ಧಿ ಕುಂಠಿತವಾಗಿದೆ‘ ಎನ್ನುತ್ತಾರೆ ಗ್ರಾಮಸ್ಥ ಸುಭಾಸ ಯಳಕಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.