ADVERTISEMENT

ಸಾಂಸ್ಕೃತಿಕ ಸುಗ್ಗಿ ಸಂಭ್ರಮ: ಹಳ್ಳಿ ಸೊಗಡು ಅನಾವರಣ

ಜಿಜಿಎಚ್ಎಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಇನ್ನರ್‌ ವೀಲ್ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 16:28 IST
Last Updated 8 ಜನವರಿ 2025, 16:28 IST
ಸಾಂಸ್ಕೃತಿಕ ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡಿರುವ ಅತಿಥಿಗಳು ಹಾಗೂ ಇನ್ನರ್ ವಿಲ್ ಸಂಸ್ಥೆಯ ಪದಾಧಿಕಾರಿಗಳು
ಸಾಂಸ್ಕೃತಿಕ ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡಿರುವ ಅತಿಥಿಗಳು ಹಾಗೂ ಇನ್ನರ್ ವಿಲ್ ಸಂಸ್ಥೆಯ ಪದಾಧಿಕಾರಿಗಳು    

ಬೀಳಗಿ: ಪಟ್ಟಣದ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡ್ರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಇನ್ನರ್‌ ವೀಲ್ ಸಂಸ್ಥೆಯು ಏರ್ಪಡಿಸಿದ್ದ ‘ಸಾಂಸ್ಕೃತಿಕ ಸುಗ್ಗಿ ಸಂಭ್ರಮ’ ಕಾರ್ಯಕ್ರಮವು ಇಡೀ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಆಹಾರ-ವಿಹಾರ, ಮಾತು, ಊಟ, ಉಡುಗೆ, ತೊಡುಗೆಯಲ್ಲಿ ಗ್ರಾಮೀಣ ಹಳ್ಳಿ ಸೊಗಡಿನ ರೂಪ ಆವರಿಸಿತ್ತು.

ಒಂದೆಡೆ ಹಳ್ಳಿ ಮನೆಯ ಗುಡಿಸಲನ್ನು ನಿರ್ಮಿಸಿ ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಜನರು ನಿತ್ಯ ಬಳಸುವ ಆಹಾರ ಮತ್ತು ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಬಾವಿ, ಹೊಲ-ತೋಟ, ಗಿಡಗಳಂತಹ ಹಳ್ಳಿ ಮನೆ ವಾತಾವರಣ, ರೈತಾಪಿ ಜನರು ಬಳಸುವ ಕೃಷಿ- ಗೃಹಪಯೋಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿನಿಯರು ಅವುಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಮಾತನಾಡಿ, ಅಕ್ಷರ ಕಲಿತ ವ್ಯಕ್ತಿ ಮೋಸ ಮಾಡಬಹುದು ಆದರೆ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡ ವ್ಯಕ್ತಿ ಎಂದೂ ಮೋಸ ಮಾಡುವುದಿಲ್ಲ ಎಂದರು.

ADVERTISEMENT

ಜೆಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ್ರ ಮಾತನಾಡಿ, ಕಬ್ಬು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಯಂತ್ರಗಳ ಬಳಕೆ ಹೆಚ್ಚಾಗಿ ಹಳೆಯ ಕೃಷಿಯೋಪಕರಣಗಳಾದ ಕುರಗಿ, ಕುಂಟೆ, ಕುಡಗೊಲು, ಎತ್ತಿನ ಬಂಡಿ ಬಳಕೆ ಕಡಿಮೆಯಾಗಿ ಮರೆಮಾಚುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಬದುಕನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳ ಆಯೋಜನೆ ಅತ್ಯವಶ್ಯಕ ಎಂದರು.

ಇನ್ನರ್‌ವಿಲ್ ತಾಲ್ಲೂಕು ಘಟಕದ ವತಿಯಿಂದ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡ್ರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ವಿದ್ಯುತ್ ಚಾಲಿತ ಕಾಲಿಂಗ್‌ಬೆಲ್‌ ಅನ್ನು ಕೊಡುಗೆಯಾಗಿ ನೀಡಿದರು.

ಇನ್ನರ್‌ ವೀಲ್‌ ತಾಲ್ಲೂಕು ಅಧ್ಯಕ್ಷೆ ಶಿಲ್ಪಾ ಪಾಟೀಲ, ಕಾರ್ಯದರ್ಶಿ ಪಾರ್ವತಿ ಚಟ್ಟೆರ, ಖಜಾಂಚಿ ಶಿವಗಂಗಾ ಪಾಟೀಲ, ಎಡಿಟರ್‌ ಅನಿತಾ ಕಿತ್ತೂರ, ಐಎಸ್ಒ ಗೌರಮ್ಮ ಬಿರಾದಾರ ಇದ್ದರು.

ವಿದ್ಯಾರ್ಥಿನಿಯರಿಂದ ಕವ್ವಾಲಿ ಗಾಯನ ಪ್ರದರ್ಶನ, ಲಂಬಾಣಿ ಕೋಲಾಟ ನೃತ್ಯ, ಸುಗ್ಗಿ ಕುಣಿತಗಳ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.

ಸಾಂಸ್ಕೃತಿಕ ಸುಗ್ಗಿ ಸಂಭ್ರಮದಲ್ಲಿ ವಿದ್ಯಾರ್ಥಿನಿಯರು ದೇಸಿ ಉಡುಪಿನಲ್ಲಿ ಸಂಭ್ರಮಿಸಿದರು

‘ಹ್ಯಾಪಿ ಸ್ಕೂಲ್‌ ನಮ್ಮ ಧ್ಯೇಯ’

ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಗ್ರಾಮೀಣ ಸೊಗಡು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಇನ್ನರ್‌ ವಿಲ್ ಸಂಸ್ಥೆ 101 ವರ್ಷ ಪೂರೈಸಿದ ಪ್ರಯುಕ್ತ ‘ಸಾಕ್ಷರತಾ ಯೋಜನೆ’ ಅಡಿಯಲ್ಲಿ ‘ಹ್ಯಾಪಿ ಸ್ಕೂಲ್‌’ ಕಲ್ಪನೆಯೊಂದಿಗೆ ಸಂಸ್ಕೃತಿ ಸಂಸ್ಕಾರ ಬಿಂಬಿಸುವ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಶೌಚಾಲಯ ಕ್ರೀಡಾ ಸಾಮಗ್ರಿ ಬೆಂಚು ಸಮವಸ್ತ್ರ ಮುಂತಾದವುಗಳ ಕೊರತೆ ಇದ್ದಲ್ಲಿ ಇನ್ನರ್‌ ವಿಲ್ ವತಿಯಿಂದ ಅವುಗಳನ್ನು ಒದಗಿಸುವ ಮೂಲಕ ‘ಹ್ಯಾಪಿ ಸ್ಕೂಲ್’ ಆಗಿ ಮಾಡುವುದು ನಮ್ಮ ಧ್ಯೇಯ ಎಂದು ಇನ್ನರ್‌ವಿಲ್ ಜಿಲ್ಲಾಧ್ಯಕ್ಷೆ ಜ್ಯೋತಿ ಕಿರಣದಾಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.