ಹುನಗುಂದ ಜೋರು ಮಳೆಗೆ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಹತ್ತಿರ ಹಿರೇಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿರುವುದು
ಹುನಗುಂದ: ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ಸೋಮವಾರ ಸಂಜೆಯೂ ಜಿಟಿ ಜಿಟಿ ಮಳೆಯಾಗಿದೆ.
ಈಗ ಹಸಿ ಮಳೆ ಆಗಿರುವುದರಿಂದ ರೈತ ಸಮುದಾಯಕ್ಕೆ ನೆಮ್ಮದಿ ತರಿಸಿದ್ದು, ಹಿಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲವಾಗಿದೆ.
ಏಳು ಮನೆಗೆ ಹಾನಿ: ಭಾನುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಹುನಗುಂದ, ಅಮರವಾತಿ, ಸೂಳೇಬಾವಿ, ಪಾಪಥ
ನಾಳ, ಸಂಗಮದಲ್ಲಿ ತಲಾ ಒಂದು, ಮರೋಳ ಎರಡು ಮನೆ ಸೇರಿದಂತೆ ಏಳು ಮನೆಗಳಿಗೆ ಹಾನಿಯಾಗಿದೆ.
ಇದೇ ರೀತಿ ಮಳೆ ಮುಂದುವರಿದರೆ ಕಟಾವಿಗೆ ಬಂದ ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳು ಹಾನಿಯಾಗಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.
ತಾಲ್ಲೂಕಿನ ಗಡಿ ಭಾಗದಲ್ಲಿರುವ ಚಿತ್ತವಾಡಗಿ ಕೆರೆ ತುಂಬಿದೆ. ಜೊತಗೆ ಹಿರೇಹಳ್ಳದ ಮೇಲ್ಭಾಗದ ಪ್ರದೇಶದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಹಿರೇಹಳ್ಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯಿತು. ತಾಲ್ಲೂಕಿನ ನಾಗೂರು ಗ್ರಾಮದಿಂದ ಹುಚನೂರು, ಅಂಟರತಾನಿ, (ಕುಷ್ಟಗಿ ತಾಲ್ಲೂಕಿನ), ಚಿತ್ತವಾಡಗಿ ಗ್ರಾಮಗಳ ಹತ್ತಿರದ ಸೇತುವೆಗಳ ಮೇಲೆ ನೀರು ಹರಿದು, ಕೆಲ ಸಮಯ ಜನರು ಸಂಚರಿಸಲು ಪರದಾಡಿದರು.
ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.