ಬಾಗಲಕೋಟೆ: ಪಾರ್ಸಲ್ ಸೇರಿದಂತೆ ಹಲವು ಸೇವೆಗಳನ್ನು ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ಆನ್‌ಲೈನ್ ಮೂಲಕ ಒದಗಿಸಲಾಗುತ್ತಿದೆ.
ಬಾಗಲಕೋಟೆ ಹಾಗೂ ಮೈಸೂರು ಜಿಲ್ಲೆಗಳನ್ನು ಪೈಲಟ್ ಆಗಿ ತೆಗೆದುಕೊಳ್ಳಲಾಗಿದ್ದು, ಇಲ್ಲಿ ಯಶಸ್ವಿಯಾದ ಮೇಲೆ ಈ ಸೇವೆಗಳನ್ನು ರಾಷ್ಟ್ರದ ಎಲ್ಲ ಅಂಚೆ ಕಚೇರಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಪಾರ್ಸ್‌ಲ್ ತೆಗೆದುಕೊಂಡು ಹೋಗಲು ಮನೆ ಬಾಗಿಲಿಗೆ ಅಂಚೆ ಸಿಬ್ಬಂದಿ: ಇಲ್ಲಿಯವರೆಗೆ ಪಾರ್ಸಲ್ ಅನ್ನು ಕಳುಹಿಸಲು ನೀವುಗಳು ಅಂಚೆ ಕಚೇರಿಗೆ ಹೋಗಬೇಕಿತ್ತು. ಪಾರ್ಸಲ್ ಮಾಡಿದ ವಸ್ತು ಮನೆ ಬಾಗಿಲಿಗೆ ಬರುತ್ತಿತ್ತು.
ಆನ್‌ಲೈನ್‌ನಲ್ಲಿ ನೀವು ಪಾರ್ಸಲ್ ಬುಕ್ ಮಾಡಿದರೆ, ಅಂಚೆ ಸಿಬ್ಬಂದಿಯೇ ನಿಮ್ಮ ಮನೆ ಬಾಗಿಲಿಗೆ ಬಂದು ವಸ್ತುಗಳನ್ನು ಸಂಗ್ರಹಿಸಲಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಒಂದಷ್ಟು ಮೊತ್ತ ಪಾವತಿಸಬೇಕು.
ಮೊಬೈಲ್‌ನಲ್ಲಿಯೇ ಗ್ರಾಹಕರು ತಾವು ಕಳುಹಿಸಿದ ಪಾರ್ಸಲ್ ಎಲ್ಲಿದೆ ಎಂಬುದನ್ನು ಟ್ರ್ಯಾಕಿಂಗ್ ಮಾಡಬಹುದು. ನೀವು ಕಳುಹಿಸಿದವರಿಗೆ ಪಾರ್ಸಲ್ ಮುಟ್ಟಿಸುತ್ತಿದ್ದಂತೆಯೇ ಪೋಸ್ಟ್‌ಮನ್ ತಮ್ಮ ಮೊಬೈಲ್‌ನಲ್ಲಿ ಡಿಜಿಟಲ್ ಸಹಿ ಪಡೆಯುತ್ತಾರೆ. ಕೂಡಲೇ ಕಳುಹಿಸಿದವರಿಗೆ ಪಾರ್ಸಲ್ ತಲುಪಿದ ಸಂದೇಶ ಬರುತ್ತದೆ.
ಬಾರ್ ಕೋಡ್ ವ್ಯವಸ್ಥೆ: ‘ಪತ್ರ, ಲಕೋಟೆಗಳನ್ನು ಕಳುಹಿಸಲು ಬಾರ್ ಕೋಡ್ ವ್ಯವಸ್ಥೆ ಮಾಡಲಾಗುತ್ತಿದೆ. ಬಾರ್ ಕೋಡ್ ಮೂಲಕ ಕಳುಹಿಸಿದವರು ಅವು ಎಲ್ಲಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ’ ಎನ್ನುತ್ತಾರೆ ಬಾಗಲಕೋಟೆ ಅಂಚೆ ಕಚೇರಿ ಅಧೀಕ್ಷಕ ಎಚ್.ಬಿ. ಹಸಬಿ.
‘ಅಡ್ವಾನ್ಸ್‌ಡ್ ಪೋಸ್ಟಲ್ ಟೆಕ್ನಾಲಜಿ ಅಳವಡಿಸಿಕೊಳ್ಳಲಾಗಿದೆ. ಜಿಲ್ಲೆಯ 46 ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಪಡೆಯಬಹುದಾಗಿದೆ. ಎಲ್ಲ ಕಚೇರಿಗಳು ಇದಕ್ಕಾಗಿಯೇ ಗಣಕೀಕರಣಗೊಂಡಿವೆ’ ಎಂದು ತಿಳಿಸಿದರು.
ಅಂಚೆ ಇಲಾಖೆಯ ಡಾಕ್ಸ್ ಸೇವಾ ಆ್ಯಪ್‌ನಲ್ಲಿ ಇಲಾಖೆ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ವಿವಿಧ ಸೇವೆಗಳನ್ನು ಈಗ ಆನ್‌ಲೈನ್ ಮೂಲಕ ನೀಡಲಾಗುತ್ತಿದೆ.
ಜ್ಞಾನ ಪೋಸ್ಟ್: ಪಠ್ಯಪುಸ್ತಕ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿ ಜ್ಞಾನ ಪೋಸ್ಟ್ ಸೇವೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ.
ಬುಕ್ ಪ್ಯಾಕೇಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ದತಿಯಿಂದ ಪಠ್ಯಪುಸ್ತಕ, ಸಾಹಿತ್ಯ ಕೃತಿಗಳ ರವಾನೆ ದುಬಾರಿಯಾಗಿತ್ತು. ಇದನ್ನು ಮನಗಂಡು ಅಂಚೆ ಇಲಾಖೆಯ ಈ ಸೇವೆ ಆರಂಭಿಸಿದ್ದು, 300 ಗ್ರಾಂ ಪುಸ್ತಕವನ್ನು ₹20 ಗಳಲ್ಲಿ ಕಳುಹಿಸಬಹುದಾಗಿದೆ.
ಆನ್‌ಲೈನ್ ಸೇವೆಗೆ ಅವಶ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ಉಪಯೋಗ ಪಡೆದುಕೊಳ್ಳಬೇಕುಎಚ್.ಬಿ. ಹಸಬಿ ಅಧೀಕ್ಷಕ ಅಂಚೆ ಕಚೇರಿ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.