ADVERTISEMENT

ಮಹಾಲಿಂಗಪುರ: 400 ಮನೆಗಳ ನಿರ್ಮಾಣ ನನೆಗುದಿಗೆ

ಅವಧಿ ಮುಗಿದರೂ ಪೂರ್ಣಗೊಳ್ಳದ ₹ 37 ಕೋಟಿ ವೆಚ್ಚದ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:24 IST
Last Updated 11 ಜುಲೈ 2025, 4:24 IST
   

ಮಹಾಲಿಂಗಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ಕೆಂಗೇರಿಮಡ್ಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ ಒನ್ ಮನೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ.

ವಸತಿ ರಹಿತ ಕೊಳಗೇರಿ ನಿವಾಸಿಗಳು ಸ್ವಂತ ಸೂರು ಹೊಂದಬೇಕೆಂಬುದು ಈ ಯೋಜನೆಯ ಆಶಯವಾಗಿತ್ತು. ಒಟ್ಟು 400 ಮನೆಗಳ ನಿರ್ಮಾಣಕ್ಕಾಗಿ ಒಂದು ಕಟ್ಟಡದಲ್ಲಿ 50 ಬ್ಲಾಕ್‍ಗಳು ಇರುತ್ತವೆ. ಒಂದು ಬ್ಲಾಕ್‍ನಲ್ಲಿ ಕೆಳಗಡೆ ತಲಾ ನಾಲ್ಕು ಮನೆಗಳು, ಅದೇ ಮಾದರಿಯಲ್ಲಿ ಮೇಲೆ ನಾಲ್ಕು ಮನೆಗಳ ಸಮುಚ್ಚಯ ನಿರ್ಮಾಣದ ವಿಶೇಷ ಯೋಜನೆ ಇದಾಗಿದೆ. ಎಲ್ಲ ಮನೆಗಳ ನಿರ್ಮಾಣ ಕಾಮಗಾರಿ ಸದ್ಯ ಪ್ಲಿಂತ್ ಹಂತ, ಸ್ಲ್ಯಾಬ್ ಹಂತದಲ್ಲಿಯೇ ಇವೆ. ಪೂರ್ಣಗೊಳ್ಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ.

ಜಾಗ ಹಸ್ತಾಂತರ: ನಿವೇಶನ ರಹಿತ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಕೆಂಗೇರಿಮಡ್ಡಿಯ ಸರ್ವೇ ನಂ 30/ಡಿ ಯಲ್ಲಿನ 24 ಎಕರೆ 32 ಗುಂಟೆ ಜಾಗದಲ್ಲಿ 5 ಎಕರೆ ಜಾಗವನ್ನು ವಿಜಯಪುರದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ 2022ರಲ್ಲಿ ಪುರಸಭೆಯಿಂದ ಹಸ್ತಾಂತರಿಸಲಾಗಿದೆ. 500 ಮನೆಗಳು ಮಂಜೂರಾಗಿದ್ದರೂ 400 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ADVERTISEMENT

ನಿಗದಿಪಡಿಸಿದ ಮೊತ್ತ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯ ಈ ಯೋಜನೆಯ ಪ್ರತಿ ಮನೆ ನಿರ್ಮಾಣದ ಘಟಕ ವೆಚ್ಚವನ್ನು ಎಲ್ಲ ವರ್ಗದವರಿಗೆ ₹ 6.89 ಲಕ್ಷ ನಿಗದಿಪಡಿಸಲಾಗಿದೆ. ಇದರಲ್ಲಿ ಫಲಾನುಭವಿ ₹ 1.03 ಲಕ್ಷ ವಂತಿಗೆ ಪಾವತಿಸಬೇಕಿದೆ. ಉಳಿದದ್ದು ಕೇಂದ್ರ ₹ 1.50 ಲಕ್ಷ ಮತ್ತು ರಾಜ್ಯ ಸರ್ಕಾರದ ₹ 1.20 ಲಕ್ಷ ಸಹಾಯಧನ ಮತ್ತು ಬ್ಯಾಂಕ್ ಸಾಲ ಒಳಗೊಂಡಿದೆ.

ಅರ್ಜಿ ಸಲ್ಲಿಕೆ: ಪಟ್ಟಣದಲ್ಲಿ 23 ವಾರ್ಡ್‍ಗಳಿದ್ದು, ಮನೆಗಳಿಗಾಗಿ ಪ್ರತಿ ವಾರ್ಡ್‍ನಿಂದ 20 ರಿಂದ 25 ಫಲಾನುಭವಿಗಳ ಹೆಸರನ್ನು ಆಯಾ ವಾರ್ಡ್‍ನ ಸದಸ್ಯರಿಂದ ಪಟ್ಟಿ ಪಡೆಯಲಾಗಿದೆ. ಆದರೆ, ಅವರಿಂದ ಹಣ ಪಾವತಿಸಿಕೊಂಡಿಲ್ಲ. ‘ಈಗಾಗಲೇ 300ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, ಮನೆಗಳ ನಿರ್ಮಾಣವಾದ ನಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ವಿಜಯಪುರದ ಸ್ಲಂ ಬೋರ್ಡ್ ಎಇಇ ಶಿವಾನಂದ ರಾಠೋಡ ತಿಳಿಸಿದರು.

ಯೋಜನೆ ಅಪೂರ್ಣ: ಮನೆಗಳ ನಿರ್ಮಾಣಕ್ಕಾಗಿ 37.09 ಕೋಟಿ ರೂ.ಗೆ ಶ್ರೀಕಾಂತ ಬಂಡಿ ಎಂಬುವರಿಗೆ ಟೆಂಡರ್ ನೀಡಲಾಗಿದೆ. 2022ರಲ್ಲಿ ಗುತ್ತಿಗೆ ನೀಡಿ 15 ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ. ‘ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಆಗಿಲ್ಲವೆಂದು ಕಾಮಗಾರಿ ಮುಗಿಸಲು ಗುತ್ತಿಗೆದಾರ ವಿಳಂಬ ಮಾಡಿದ್ದಾರೆ’ ಎಂದು ವಿಜಯಪುರದ ಸ್ಲಂ ಬೋರ್ಡ್‌ನ ಎಇ ಸೋಹೆಲ್ ಕಮಲಾಪುರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.