ADVERTISEMENT

‘ರಾಜಕೀಯ ಲಾಭಕ್ಕಾಗಿ ತಾಲ್ಲೂಕು ಒಡೆಯದಿರಿ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:24 IST
Last Updated 18 ಜೂನ್ 2025, 15:24 IST
ಹುನಗುಂದದ ಗಚ್ಚಿನಮಠದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ಪಟ್ಟಣದ ಮಹಾಂತಯ್ಯ ಗಚ್ಚಿನಮಠ ಮಾತನಾಡಿದರು
ಹುನಗುಂದದ ಗಚ್ಚಿನಮಠದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ಪಟ್ಟಣದ ಮಹಾಂತಯ್ಯ ಗಚ್ಚಿನಮಠ ಮಾತನಾಡಿದರು   

ಹುನಗುಂದ: ರಾಜಕೀಯ ಲಾಭಕ್ಕಾಗಿ ತಾಲ್ಲೂಕು ಒಡೆಯುವ ಕಾರ್ಯಕ್ಕೆ ಮುಂದಾದರೆ ತಾಲ್ಲೂಕಿಗೆ ಮಾಡುವ ದ್ರೋಹ ಎಂದು ಪಟ್ಟಣದ ಮುಖಂಡ ಮಹಾಂತಯ್ಯ ಗಚ್ಚಿನಮಠ ಹೇಳಿದರು.

ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಹುನಗುಂದ ತಾಲ್ಲೂಕಿನ 20 ಗ್ರಾಮಗಳನ್ನು ಗುಳೇದಗುಡ್ಡ ಅಥವಾ ಬಾಗಲಕೋಟೆಗೆ ಸೇರ್ಪಡೆ ಮಾಡಬೇಕು ಎಂಬ ಹೇಳಿಕೆ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಪಟ್ಟಣದ ಗಚ್ಚಿನಮಠದಲ್ಲಿ ನಡೆದ ಚಿಂತನ ಮಂಥನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಷಡ್ಯಂತ್ರ ಮಾಡಿ ತಾಲ್ಲೂಕು ಒಡೆಯುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಮಗ್ರ ತಾಲ್ಲೂಕಿನ ಅಸ್ತಿತ್ವಕ್ಕೆ ದಕ್ಕೆ ಬರಲಿದೆ ಎಂಬ ಸಂಶಯ ಮೂಡುತ್ತಿದೆ. ಹೀಗಾಗಿ ಜಾತಿ, ಮತ, ಪಂಥ ಬೇಧ ಮರೆತು ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಜೊತಗೆ ಈ ವಿಷಯವನ್ನು ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಗಮನಕ್ಕೆ ತರುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ADVERTISEMENT

ಪಟ್ಟಣದ ನಾಗರಿಕ ಸೇವಾ ಸುಧಾರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಮಾತನಾಡಿ, ಶಾಸಕ ಎಚ್.ವೈ. ಮೇಟಿ ಅವರ ಹೇಳಿಕೆಯನ್ನು ಖಂಡಿಸೋಣ. ಅಖಂಡ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಹಳ್ಳಿಗಳನ್ನು ಒಳಗೊಂಡ ತಾಲ್ಲೂಕು ನಮ್ಮದಾಗಿತ್ತು. ನಂತರ ಇಳಕಲ್ ತಾಲ್ಲೂಕನ್ನು ಮಾಡಿದ್ದರಿಂದ ಕೇವಲ 80 ಹಳ್ಳಿಗಳು ಉಳಿದಿವೆ. ಮತ್ತೆ 20 ಗ್ರಾಮಗಳು ಒಡೆದು ಹೋದರೆ ವ್ಯಾಪಾರ ವಹಿವಾಟು ಕುಂಠಿತಗೊಳ್ಳಲಿದೆ. ಜೊತಗೆ ತಾಲ್ಲೂಕಿನ ಪ್ರಗತಿಗೆ ಹಿನ್ನಡೆಯಾಗಲಿದೆ ಎಂದರು.

ಮುಖಂಡರಾದ ಶೇಖರಪ್ಪ ಬಾದವಾಡಗಿ, ಎಂ ಎಸ್ ಮಠ, ಸಂಗಣ್ಣ ಅವಾರಿ ಮಹಾಂತೇಶ ಹಳ್ಳೂರು, ಪ್ರಭು ಇದ್ದಲಗಿ ಮಾತನಾಡಿದರು. ಕೃಷ್ಣ ಜಾಲಿಹಾಳ, ಸಾಂತಪ್ಪ ಹೊಸಮನಿ ಚನ್ನಬಸಪ್ಪ ಇಳಕಲ್, ವಿಜಯ ಮಹಾಂತೇಶ ಮಲಗಿಹಾಳ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.