
ಬಾಗಲಕೋಟೆ: ವಯೋಸಹಜ ಕಾಯಿಲೆಯಿಂದ ಮಂಗಳವಾರ ಮೃತರಾಗಿದ್ದ ಶಾಸಕ ಎಚ್.ವೈ. ಮೇಟಿ ಅವರ ಅಂತ್ಯಕ್ರಿಯೆ ತಿಮ್ಮಾಪುರ ಗ್ರಾಮದ ಅವರ ಜಮೀನಿನಲ್ಲಿ ತಂದೆ-ತಾಯಿ ಸಮಾಧಿ ಪಕ್ಕದಲ್ಲಿ ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಬೆಂಗಳೂರನಿಂದ ರಸ್ತೆ ಮಾರ್ಗವಾಗಿ ಮೇಟಿ ಅವರ ಪಾರ್ಥಿವ ಶರೀರ ಬೆಳಿಗ್ಗೆ ಬಾಗಲಕೋಟೆ ಜಿಲ್ಲೆಗೆ ಬಂದಿತು. ದಾರಿಯಲ್ಲಿ ಬರುವ ಅಮೀನಗಡ, ಕಮತಗಿ, ಶಿರೂರ ಪಟ್ಟಣಗಳಲ್ಲಿ ಅಭಿಮಾನಿಗಳು ಮುಗಿಬಿದ್ದು ಅಂತಿಮ ದರ್ಶನ ಪಡೆದುಕೊಂಡರು.
ಜಿಲ್ಲಾ ಕ್ರೀಡಾಂಗಣದಲ್ಲಿಯೂ ಕೆಲ ಕಾಲ ಜನಪ್ರತಿನಿಧಿಗಳು, ರಾಜಕೀಯ ಮುಖಂಡು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ನಂತರ ತಿಮ್ಮಾಪುರ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು.
ಗ್ರಾಮದಲ್ಲಿರುವ ಅವರ ಸ್ವಗೃಹಕ್ಕೆ ತೆಗೆದುಕೊಂಡು ಹೋದಾಗ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಟುಂಬದ ಸದಸ್ಯರು, ಬಂಧು-ಮಿತ್ರರು, ಗ್ರಾಮಸ್ಥರು, ಅಭಿಮಾನಿಗಳು ಮಧ್ಯಾಹ್ನದವರೆಗೂ ಅಂತಿಮ ದರ್ಶನ ಪಡೆದರು. ತಳ್ಳಾಟವೂ ಆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಭೈರತಿ ಸುರೇಶ, ಎಚ್.ಸಿ.ಮಹಾದೇವಪ್ಪ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ ಬಾಗಲಕೋಟೆ-ವಿಜಯಪುರ ಜಿಲ್ಲೆಗಳ ಶಾಸಕರು ಅಂತಿಮ ನಮನ ಸಲ್ಲಿಸಿದರು. ಬಳಿಕ ಸರ್ಕಾರಿ ಗೌರವದೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ವೈ. ಮೇಟಿ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.