
ಬಾಗಲಕೋಟೆ: ‘ಹುಟ್ಟು ಆಕಸ್ಮಿಕ, ಸಾವು ಖಚಿತ. ಜೀವಿತ ಅವಧಿಯಲ್ಲಿ ಜೀವನ ಸಾರ್ಥಕ ಮಾಡಿಕೊಂಡಿದ್ದಾನೆಯೇ ಎಂಬುದು ಮುಖ್ಯ. ಮೇಟಿ ಸಾರ್ಥಕ ಜೀವನ ನಡೆಸಿದ್ದಾರೆ. ಮೇಟಿಗೆ ಮೇಟಿನೇ ಸಾಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿಕೊಂಡರು.
ತಾಲ್ಲೂಕಿನ ತಿಮ್ಮಾಪುರದಲ್ಲಿ ಬುಧವಾರ ನಡೆದ ಅಂತ್ಯಕ್ರಿಯೆಗೂ ಮುನ್ನ ‘ನುಡಿ ನಮನ’ ಸಲ್ಲಿಸಿ ಮಾತನಾಡಿದ ಅವರು, ‘ನಿಷ್ಠೆ, ಬದ್ಧತೆ ಎಲ್ಲರಿಗೂ ಬರುವುದಿಲ್ಲ. ಮೆಟಿಗೆ ಇನ್ನೊಂದು ಹೆಸರೇ ನಿಷ್ಠಾವಂತ ರಾಜಕಾರಣಿ’ ಎಂದರು.
‘ವೈರಗಳೊಂದಿಗೂ ಚೆನ್ನಾಗಿರುತ್ತಿದ್ದರು. ವಿಶಿಷ್ಟ ರಾಜಕಾರಣಿಯಾಗಿದ್ದರು. ವೈಯಕ್ತಿಕವಾಗಿ ನನಗೆ ಬಹುದೊಡ್ಡ ನಷ್ಟವಾಗಿದೆ. ನನ್ನ ಫಾಲೋವರ್ಸ್‌ಗಳ ಅಗ್ರಗಣ್ಯರಲ್ಲಿ ಮೇಟಿ ಅವರೂ ಒಬ್ಬರು. ಆಸ್ತಿ ಮಾಡುವ, ದುರಾಸೆ ಇರುವ, ಅಪ್ರಮಾಣಿಕ ವ್ಯಕ್ತಿಯಾಗಿರಲಿಲ್ಲ. ಸರಳ, ಸಜ್ಜನರಾಗಿದ್ದರು ಎಂದು ಗುಣಗಾನ ಮಾಡಿದರು.
‘ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕೇಳುತ್ತಲೇ ಇದ್ದರು. ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಇಲ್ಲಿ ಕಾಲೇಜು ಆರಂಭಕ್ಕೆ ಮೇಟಿ ಕಾರಣ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಸ್ಥಾಪಿಸಲಾಗುವುದು. ಕಾಲೇಜು ಕಟ್ಟಡಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶಂಕುಸ್ಥಾಪನೆ ಮಾಡಲಾಗುವುದು. ಮೇಟಿ ಅವರು ಇರಬೇಕಾಗಿತ್ತು’ ಎಂದರು.
‘ನನ್ನ ತೀರ್ಮಾನಕ್ಕೆ ಯಾವಾಗಲೂ ಬದ್ಧರಾಗಿರುತ್ತಿದ್ದರು. ಯಾವುದೇ ಪಕ್ಷದಲ್ಲಿದ್ದಾಗಲೂ ಜತೆಗಿದ್ದರು. ಹೆಗಲಿಗೆ ಹೆಗಲು ಕೊಟ್ಟು ದುಡಿದರು. ನನಗಿಂತ ಹಿರಿಯರಾದರೂ, ನನ್ನನ್ನೇ ಹಿರಿಯರಂತೆ ಕಾಣುತ್ತಿದ್ದರು. ಅಧಿಕಾರ ಇದೆ ಎಂದು ಯಾವತ್ತೂ ಅಹಂಕಾರದಿಂದ ನಡೆದುಕೊಳ್ಳಲಿಲ್ಲ. ರಾಜಕೀಯ ಮೂಲ ತತ್ವಗಳನ್ನು ಪಾಲನೆ ಮಾಡುತ್ತಿದ್ದರು. ಸರಳ, ಸಜ್ಜನ ರಾಗಿದ್ದರು’ ಎಂದು ಹೇಳಿದರು.
‘ನನಗೆ ತಡೆಯಲಾಗದ ದುಃಖವಾಗಿದೆ. ಸಚಿವರಾಗಿದ್ದ ಮೇಟಿಯವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ ಎಂದು ವರದಿ ಇತ್ತು. ಅದನ್ನು ಹೇಳಿದಾಗ ಚಕಾರ ಎತ್ತದೇ ಒಪ್ಪಿಕೊಂಡರು. ದೇವೇಗೌಡರು ಪ್ರಧಾನಿಯಾಗಲೂ ಕಾರಣರಾದರು. ಅವರ ಜನಪ್ರಿಯತೆ ಎಷ್ಟಿತ್ತಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಕುರುಬ ಗೆಲ್ಲುವುದು ಅಷ್ಟು ಸುಲಭ ಅಲ್ಲ. ಎಲ್ಲರನ್ನೂ ಕೂಡಿಸಿಕೊಂಡು ಹೋಗುವ ಗುಣವಿದ್ದರಿಂದಾಗಿ ಗೆದ್ದರು’ ಎಂದರು.
ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಮೇಟಿಗೆ ಶತ್ರುಗಳೇ ಇರಲಿಲ್ಲ. ಉತ್ತಮ ನಾಯಕರನ್ನು ಕಳೆದುಕೊಂಡಿದ್ದೇವೆ. ಬಾದಾಮಿ ಎಲೆಕ್ಷನ್ ನಿಂತಾಗ ಈ ಮನುಷ್ಯ ನೀಡಿದ ದೊಡ್ಡ ಸಹಕಾರ ಸಿದ್ದರಾಮಯ್ಯ, ಪಕ್ಷಕ್ಕೆ ಗೆಲುವು ಸಿಕ್ಕಿತು’ ಎಂದು ಭಾವುಕರಾದರು.
ಮಾಜಿ ಸಚಿವ ಎಸ್.ಆರ್. ಪಾಟೀಲ, ‘ಅವರ, ನನ್ನ ನಾಲ್ಕು ದಶಕಗಳ ಪಯಣ ಅಂತ್ಯವಾಗಿದೆ. ವಿವಾದತೀತ ವ್ಯಕ್ತಿಯಾಗಿದ್ದರು’ ಎಂದರು.
ರಾಜ್ಯಸಭೆ ಪಾಟೀಲ ನಾರಾಯಣ ಭಾಂಡಗೆ ಮಾತನಾಡಿ, ‘ಮಿತಭಾಷಿ, ವಿವಾದವಿಲ್ಲದ ವ್ಯಕ್ತಿಯಾಗಿದ್ದರು’ ಎಂದು ಹೇಳಿದರು.
ಹೊಳೆಹುಚ್ಚೇಶ್ಚರ ಸ್ವಾಮೀಜಿ ಮಾತನಾಡಿ, ‘ರಾಜಕಾರಣಿಯಂತೆ ಯಾವತ್ತೂ ನಡೆದುಕೊಳ್ಳುತ್ತಿರಲಿಲ್ಲ. ಅವರ ಮನೆಯು ಯಾರೇ ಬರಲಿ ಅವರಿಗೆ ಪ್ರಸಾದಕ್ಕೆ ಮಹಾಮನೆಯಾಗಿತ್ತು’ ಎಂದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಸಿದ್ದರಾಮಯ್ಯರ ಕಟ್ಟಾ ಅನುಯಾಯಿ ಆಗಿದ್ದರು. ಭೂಮಿ ಕಳೆದುಕೊಂಡವರ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಅಪಾರ ಶ್ರಮವಹಿಸಿದ್ದರು ಎಂದು ಹೇಳಿದರು.
ಸಚಿವ ಭೈರತಿ ಸುರೇಶ ಮಾತನಾಡಿ, ಮೇಟಿ ಅವರ ನಿಧನದಿಂದ ಮುಖ್ಯಮಂತ್ರಿ ಅವರು ಅನ್ಯಮನಸ್ಕರಾಗಿದ್ದರು. ಕಾಂಗ್ರೆಸ್ ಹಾಗೂ ನಮ್ಮ ಸಮಾಜಕ್ಕೂ ನಷ್ಟ ಆಗಿದೆ. ಅವರ ಕೆಲಸ ಮುಂದುವರೆಸಿಕೊಂಡು ಹೋಗಬೇಕು’ ಎಂದರು.
ಎಚ್.ಸಿ. ಮಹದೇವಪ್ಪ ಮಾತನಾಡಿ, ದೊಡ್ಡ ಶಕ್ತಿಯಾಗಿದ್ದರು. ನಿಷ್ಠೆ, ನಂಬಿಕೆಗೆ ಹೆಸರಾಗಿದ್ದರು. ಕುಟುಂದವರಿಗಾಗಿ ಎಂದೂ ಸಹಾಯ ಕೇಳಿರಲಿಲ್ಲ. ಜನರಿಗಾಗಿ ಸಹಾಯ ಕೇಳುತ್ತಿದ್ದರು ಎಂದು ಹೇಳಿದರು.
ಶಾಸಕರಾದ ಜೆ.ಟಿ. ಪಾಟೀಲ ಜಿ.ಎಸ್. ಪಾಟೀಲ, ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಅಮರೇಗೌಡ ಬಯ್ಯಾಪುರ, ಅಶೋಕ ಮನಗೂಳಿ, ಜಗದೀಶ ಗುಡಗುಂಟಿ, ಸಿದ್ದು ಸವದಿ, ಸಿ.ಎಸ್. ನಾಡಗೌಡ, ಜಗದೀಶ ಗುಡಟುಂಟಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಎಸ್.ಜಿ. ನಂಜಯ್ಯನಮಠ, ಪ್ರಕಾಶ ತಪಶೆಟ್ಟಿ, ಆನಂದ ನ್ಯಾಮಗೌಡ, ಬಿ.ಆರ್. ಯಾವಗಲ್, ಪ್ರಕಾಶ ತಪಶೆಟ್ಟಿ, ಮಲ್ಲಿಕಾ ಘಂಟಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.