ADVERTISEMENT

ಮುಧೋಳ | ನಾಗಮೋಹನ ದಾಸ ವರದಿ ಯಥಾವತ್ತ ಜಾರಿ ಮಾಡಿ

ಲಂಬಾಣಿ, ಭಜಂತ್ರಿ, ದಾಸರ, ಬೋವಿ, ಮುಂತಾದ ಸಮುದಾಯದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:49 IST
Last Updated 29 ಆಗಸ್ಟ್ 2025, 2:49 IST
ಮುಧೋಳದಲ್ಲಿ  ರಾಜ್ಯ ಸರ್ಕಾರ ನಾಗಮೋಹನ ದಾಸ ವರದಿ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು  
ಮುಧೋಳದಲ್ಲಿ  ರಾಜ್ಯ ಸರ್ಕಾರ ನಾಗಮೋಹನ ದಾಸ ವರದಿ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು     

ಮುಧೋಳ:  ‘ರಾಜ್ಯ ಸರ್ಕಾರ ನಾಗಮೋಹನ ದಾಸ ವರದಿ ಯಥಾವತ್ತಾಗಿ ಜಾರಿ ಮಾಡಬೇಕಿತ್ತು. ನಮಗೆ ನೀಡಿದ ಮೀಸಲಾತಿಯಲ್ಲಿ ಸುಮಾರು 63 ಜಾತಿಗಳನ್ನು ಸೇರಿಸಿ ಮೀಸಲಾತಿ ನೀಡಿದೆ, ಜೊತೆಗೆ ನಮ್ಮನ್ನು ಸ್ಪೃಶ್ಯರು ಎಂದು ಸರ್ಕಾರ ಅನ್ಯಾಯ ಮಾಡಿದೆ. ನಾವು ಅಸ್ಪೃಶ್ಯರು ಎಂದು ಸರ್ಕಾರ ಪ್ರಕಟಿಸಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಬಂಜಾರ ಸಮಾಜದ ಮುಖಂಡ ಶಂಕರ ನಾಯ್ಕ ಹೇಳಿದರು.

ಸರ್ಕಾರ ಸ್ಪೃಶ್ಯರು ಎಂದು ಗುರುತಿಸಿರುವ ತಾಲ್ಲೂಕಿನ ಲಂಬಾಣಿ, ಭಜಂತ್ರಿ, ದಾಸರ, ಬೋವಿ, ಮುಂತಾದ ಸಮುದಾಯದ ಪ್ರಮುಖ ಮುಖಂಡರು ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ನಾಗಮೋಹನ ದಾಸ ಅವರ ವರದಿ ಪ್ರಕಾರ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಈಗ ನೀಡಿರುವ ಮೀಸಲಾತಿ ಪರಾಮರ್ಶಿಸಿ ಜಾರಿ ಮಾಡಬೇಕು. ಸಿದ್ದರಾಮಯ್ಯ ವರು 63 ಸಮಾಜಕ್ಕೆ ಅನ್ಯಾಯ ಮಾಡಿದ್ದೀರಿ, ನ್ಯಾಯ ಕೊಡಿ ಇಲ್ಲದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಬಂಜಾರ ಸಮಾಜ ಸ್ವಾಮೀಜಿ ಸೋಮಲಿಂಗ ಶ್ರೀ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಸರಿಪಡಿಸಿ ನ್ಯಾಯ ಕೊಡಿಸಿ, ಇಲ್ಲದಿದ್ದರೆ ಒಳಮೀಸಲಾತಿ ಜಾರಿ ಮಾಡದೆ 101 ಜಾತಿಗಳನ್ನು ಸೇರಿಸಿ ಮೊದಲು ಇದ್ದ ಹಾಗೆ ಮೀಸಲಾತಿ ನೀಡಿ, ಇಲ್ಲದಿದ್ದರೆ ಹೋರಾಟದಿಂದ ಪಡೆದುಕೊಳ್ಳುತ್ತೇವೆ’ ಎಂದರು.

ಮುಖಂಡರಾದ ತಿರುಪತಿ ಬಂಡಿವಡ್ಡರ, ಭೀಮಸಿ ಸಿಕ್ಕಲಗಾರ, ಮಂಜು, ಗಣೇಶ ರಾಠೋಡ, ಶಂಕರ ಭಜಂತ್ರಿ ಮುಂತಾದವರು ಮಾತನಾಡಿದರು.

ನಗರದ ಅಂಬೇಡ್ಕರ್‌ ವೃತ್ತದಿಂದ  ಹಂದಿ ಹಿಡಿಯುವ ಜಾಳಿಗೆ, ಹಂದಿ, ಕಲ್ಲು ಒಡೆಯುವ ಸುತ್ತಿಗೆ, ಹಾರಿ, ತಂಬೂರಿ, ಕಸಬರಿಗೆ ಮುಂತಾದ ಕುಲ ಕಸಬಿನ ಸಾಮಗ್ರಿಗಳನ್ನು ಹಿಡಿದು ಪ್ರತಿಭಟನೆ ಮೆರವಣಿಗೆ ಮಾಡಿ ಉಪ ತಹಶೀಲ್ದಾರ್‌ ಎ.ಆರ್.ನಾಯಕ ಅವರಿಗೆ ಮನವಿ ಸಲ್ಲಿಸಿದರು.‌

ಕುಮಾರ ಪೊಮ್ಮಾರ, ಗಣೇಶ ರಾಠೋಡ, ಪರಶುರಾಮ ಪೂಜಾರಿ, ಬಸು ದಾಸರ, ವಿಠ್ಠಲ ದಾಸರ, ಭೀಮಸಿ ಭಜಂತ್ರಿ, ಶೆಟ್ಟೆಪ್ಪ ಭಂಜತ್ರಿ, ಕಲ್ಲೊಳೆಪ್ಪ ಬಂಡಿವಡ್ಡರ, ಸೈದು ಬಂಡಿವಡ್ಡರ, ಕೃಷ್ಣಾ ಲಮಾಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.