ಜಮಖಂಡಿ: ಕೂಡು ಕುಟುಂಬ, ಜಾನುವಾರು, 70 ಎಕರೆಗೂ ಅಧಿಕ ಜಮೀನು, 20ಕ್ಕೂ ಹೆಚ್ಚು ಕೆಲಸಗಾರರು, ಜಮೀನಿನಲ್ಲಿ ತರಹೇವಾರಿ ಬೆಳೆ, ಹಣ್ಣಿನ ಗಿಡಗಳು, ಕಣ್ಮನ ಸೆಳೆಯುವ ಅರಣ್ಯೀಕರಣ.
ಇದು ಸಮಗ್ರ ಮಿಶ್ರ ಬೇಸಾಯ ಮಾಡುತ್ತಿರುವ ಸಮೀಪದ ಕಲ್ಹಳ್ಳಿ ಗ್ರಾಮದ ರೈತ ಅಣ್ಣಪ್ಪ ನ್ಯಾಮಣ್ಣ ನಂದಗಾಂವ, ಸಹೋದರಾದ ಅಪ್ಪಾಸಾಬ ಹಾಗೂ ಪರಪ್ಪ ಅವರ ತೋಟದಲ್ಲಿ ಕಾಣಸಿಗುವ ಸೊಬಗು.
ಹನಿ ನೀರಾವರಿ ಮೂಲಕ ಸಮಗ್ರ ಕೃಷಿ ಮಾಡಿ, ಕಡಿಮೆ ನೀರು ಬಳಸಿ ಅಚ್ಚುಕಟ್ಟಾಗಿ ಹೆಚ್ಚಿನ ಬೆಳೆ ತೆಗೆದು ಈ ಭಾಗದಲ್ಲಿ ಮಾದರಿಯಾಗಿದ್ದಾರೆ ಈ ಸಹೋದರರು.
70 ಎಕರೆ ಜಮೀನಿನಲ್ಲಿ ಸದ್ಯ ಎಂಟು ಎಕರೆ ದ್ರಾಕ್ಷಿ ಬೆಳೆಯುತ್ತಿದ್ದು, ಪ್ರತಿವರ್ಷ 300 ಕ್ವಿಂಟಲ್‌ಗೂ ಅಧಿಕ ಒಣದ್ರಾಕ್ಷಿ ಪಡೆಯುತ್ತಾರೆ. 25–30 ಎಕರೆ ಕಬ್ಬು ಇದ್ದು, ಒಂದು ಸಾವಿರ ಟನ್‌ಗಿಂತ ಹೆಚ್ಚು ಕಬ್ಬು ಬೆಳೆಯುತ್ತಿದ್ದಾರೆ. ಅರಿಸಿನ, ಬಾಳೆ, ದಾಳಿಂಬೆ, ಸೆಣಬು ಹಾಗೂ ಕಳೆದ ವರ್ಷ ಒಂದು ಎಕರೆ ಸೇಬು ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ.
ಕಬ್ಬು, ಅರಿಸಿನ ಸೇರಿದಂತೆ ವಿವಿಧ ಬೆಳೆಗಳನ್ನು ತೆಗೆದು ಆ ನೆಲದಲ್ಲಿ ಸೆಣಬು ಬೆಳೆದು ಹೂ, ಕಾಯಿ ಕಟ್ಟುವ ಸಂದರ್ಭದಲ್ಲಿ ಅದನ್ನು ಜಮೀನಿನಲ್ಲಿ ನೇಗಿಲ ಹೊಡೆದು ಮುಚ್ಚುತ್ತಾರೆ. ಇದರಿಂದ ಜಮೀನಿಗೆ ಹೆಚ್ಚಿನ ಗೊಬ್ಬರ ಸಿಗುತ್ತದೆ. ಇದರ ಜತೆಗೆ ಪ್ರತಿವರ್ಷ ಅಂದಾಜು 300 ಟನ್‌ಗೂ ಹೆಚ್ಚು ತಿಪ್ಪೆ ಗೊಬ್ಬರವನ್ನು ಖರೀದಿಸಿ ಜಮೀನಿಗೆ ಹಾಕುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ, ಇಳುವರಿಯೂ ಹೆಚ್ಚುತ್ತದೆ.
ಎಂಟು ಎಕರೆಯಲ್ಲಿ ಬೆಳೆದ ದ್ರಾಕ್ಷಿಯನ್ನು ಒಣದ್ರಾಕ್ಷಿಯನ್ನಾಗಿ ಮಾಡಲು 14 ಒಣದ್ರಾಕ್ಷಿ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ. ಮೂರು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಾರೆ.
ಮೂರು ಕಿ.ಮೀ. ಕಾಲುವೆಯಿಂದ ಪೈಪ್ ಲೈನ್ ಮಾಡಿ, ನೀರು ಸಂಗ್ರಹಿಸಲು ಒಂದು ದೊಡ್ಡ ಹೊಂಡ ನಿರ್ಮಿಸಿಕೊಂಡಿದ್ದಾರೆ. ಆ ಹೊಂಡದ ಮೂಲಕ 2–3 ಕಿ.ಮೀ. ವರೆಗೆ ಯಾವುದೇ ಪಂಪಸೆಟ್ ಇಲ್ಲದೆ ಜಮೀನಿಗೆ ನೀರು ಹೋಗುವಂತೆ ಮಾಡಿರುವುದು ವಿಶೇಷ. ಎಂಟು ಕೊಳವೆ ಬಾವಿ, ಒಂದು ತೆರೆದ ಬಾವಿ ಜತೆ ಮೂರು ಚಿಕ್ಕ ಹೊಂಡಗಳನ್ನು ನಿರ್ಮಿಸಿ ಅಲ್ಲಿಂದ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಹಾಯಿಸುತ್ತಾರೆ.
ಕಡಲೆ ಹಿಟ್ಟು, ಬೆಲ್ಲ, ತೇವಾಂಶವಾದ ಮಣ್ಣು, ಮಜ್ಜಿಗೆ, ಜಾನುವಾರಗಳ ಮೂತ್ರವನ್ನು ಸೇರಿಸಿ 10 ದಿನಗಳವರೆಗೆ ಇಟ್ಟು ದ್ರವ ಜೀವಾಮೃತ ತಯಾರಿಸಿ ಬಾಳೆ, ದ್ರಾಕ್ಷಿ, ದಾಳಿಂಬೆ ಗಿಡಗಳಿಗೆ ಹಾಕುತ್ತಾರೆ.
ರೈತ ಅಣ್ಣಪ್ಪ ನ್ಯಾಮಣ್ಣ ನಂದಗಾಂವ ಅವರು ತಮ್ಮ ಜಮೀನಿನಲ್ಲಿ ಮಾತ್ರವಲ್ಲದೆ ಕಲ್ಹಳ್ಳಿ ಗ್ರಾಮದಲ್ಲಿ 500 ಎಕರೆಗೂ ಅಧಿಕ ಅರಣ್ಯ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯದಂತೆ ನೋಡಿಕೊಳ್ಳುತ್ತಿರುವುದಕ್ಕೆ ಅವರನ್ನು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸರ್ಕಾರದಿಂದ ಕೃಷಿ ಅಧ್ಯಯನ ಮಾಡಲು ಚೀನಾ ಪ್ರವಾಸವನ್ನೂ ಕೈಗೊಂಡಿದ್ದರು. ನೀರಿನ ಸದ್ಬಬಳಕೆಗಾಗಿ ಅವರಿಗೆ ಪ್ರಶಸ್ತಿಗಳೂ ಲಭಿಸಿವೆ.
ಮಿಶ್ರ ಬೆಳೆ ರೈತರಿಗೆ ಲಾಭದಾಯಕ. ಹೆಚ್ಚು ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ರಾಸಾಯನಿಕ ಬಳಕೆ ತಗ್ಗಿಸಬೇಕು. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕುಅಣ್ಣಪ್ಪ ನ್ಯಾಮಣ್ಣ, ನಂದಗಾಂವ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.