ADVERTISEMENT

ಗುಳೇದಗುಡ್ಡ: ನಾಲ್ಕು ದಶಕವಾದರೂ ರಂಗಮಂದಿರ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:56 IST
Last Updated 12 ಸೆಪ್ಟೆಂಬರ್ 2025, 2:56 IST
ಗುಳೇದಗುಡ್ಡದ ಕಂದಗಲ್ ಹನಮಂತರಾಯರ ರಂಗಮಂದಿರದಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ
ಗುಳೇದಗುಡ್ಡದ ಕಂದಗಲ್ ಹನಮಂತರಾಯರ ರಂಗಮಂದಿರದಲ್ಲಿ ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ   

ಗುಳೇದಗುಡ್ಡ: ಗುಳೇದಗುಡ್ಡ ಕರ್ಮಭೂಮಿಯಾಗಿಸಿಕೊಂಡು ರಂಗಭೂಮಿಯ ಸಾಧಕರಾದ ಕಂದಗಲ್ ಹನಮಂತರಾಯರ ಹೆಸರಿನಲ್ಲಿ 40 ವರ್ಷ ಹಿಂದೆ  ಕಟ್ಟಡ ಆರಂಭಿಸಿದರೂ ಅದು ಈವರೆಗೂ ಪೂರ್ಣಗೊಳ್ಳದಿರುವುದು ರಂಗಕರ್ಮಿಗಳಿಗೆ ಹಾಗೂ ಸಾಂಸ್ಕೃತಿಕ ವಲಯಕ್ಕೆ ನಿರಾಸೆಯಾಗಿದೆ.

ರಂಗಮಂದಿರ 3 ಕೊಠಡಿಗಳನ್ನು ಹೊಂದಿದ್ದು, ಅವುಗಳ ಬಾಗಿಲು ಮುರಿದಿರುವುದರಿಂದ ಅವು ಯಾವಾಗಲೂ ತೆರೆದೇ ಇರುತ್ತವೆ. 

ನಿರ್ವಹಣೆ ಕೊರತೆಯಿಂದ ಹಾಳಾಗಿರುವ  ರಂಗಮಂದಿರ ಇಂದು ಕುಡುಕರ ತಾಣವಾಗಿದೆ. ಜೊತೆಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಬೀಳುವ ಹಂತದಲ್ಲಿದೆ ಮತ್ತು ಮುಳ್ಳು ಕಂಟಿಯಿಂದ ತುಂಬಿ ಹೋಗಿರುವುದರಿಂದ ಅನೈತಿಕ ಚಟುವಟಿಕೆ ತಾಣವಾಗಿದೆ. ರಂಗಮಂದಿರ ಪೂರ್ಣಗೊಳಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ADVERTISEMENT

1985ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜೀವರಾಜ್ ಆಳ್ವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅವಧಿಯಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದಿಗೆ ₹5 ಲಕ್ಷ ಅನುದಾನದೊಂದಿಗೆ ಕಟ್ಟಡ ಆರಂಭವಾಯಿತು. ನಂತರದ ದಿನಗಳಲ್ಲಿ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿತು.

ನಂತರ 2012ರಲ್ಲಿ ಗೋವಿಂದ ಕಾರಜೋಳ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹10 ಲಕ್ಷ  ಅನುದಾನ ಬಿಡುಗಡೆಗೊಳಿಸಿದರು. ಅದರಲ್ಲೂ ಪೂರ್ಣಗೊಳ್ಳದೆ ಜಾಲಿ ಕಂಟಿ ಬೆಳೆದು ನಿಂತಿತ್ತು.  ಈಚೆಗೆ 2 ವರ್ಷದ ಹಿಂದೆ ಮತ್ತೆ ₹25 ಲಕ್ಷ ಬಿಡುಗಡೆಯಾಗಿ 2023ರಲ್ಲಿ ಲ್ಯಾಂಡ್ ಆರ್ಮಿಯಿಂದ ಕಾಮಗಾರಿ ಆರಂಭವಾಗಿತ್ತು. ಇದ್ದಕಿದ್ದಂತೆ ಕೆಲಸ ನಿಲ್ಲಿಸಲಾಯಿತು. ಇದಕ್ಕೆ ಕಾರಣ ಇದುವರೆಗೆ ಗೊತ್ತಾಗಿಲ್ಲ.
ಸರ್ಕಾರ ಶೀಘ್ರ ರಂಗಮಂದಿರ ಪೂರ್ಣಗೊಳಿಸಿ ಕಲಾ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುವುದು ರಂಗಕಲಾವಿದರ ಒತ್ತಾಯವಾಗಿದೆ.

‘ಕಲಾವಿದರಾದ ನಾವು ಕಂದಗಲ್ ಹನಮಂತರಾಯರ ರಂಗಮಂದಿರ ಪೂರ್ಣಗೊಂಡು ಕಲಾ ಪ್ರದರ್ಶನ ಮಾಡುತ್ತೇವೆ ಎಂದು ಅಂದುಕೊಂಡಿದ್ದೇವು. ಆದರೆ ಇದುವರೆಗೂ ಪೂರ್ಣಗೊಳ್ಳದೆ ಇರುವುದು ದುರಂತವೇ ಸರಿ’ ಎಂದು ಕಲಾವಿದೆ ಜ್ಯೋತಿ ಗುಳೇದಗುಡ್ಡ ಹೇಳಿದರು.

ಕಂದಗಲ್ ಹನಮಂತರಾಯರ ಹೆಸರಿನಲ್ಲಿ ಟ್ರಸ್ಟ್‌ ರಚನೆಗೆ ಅಧ್ಯಕ್ಷನಾಗಿದ್ದು, ಅದರ ವ್ಯಾಪ್ತಿಯಲ್ಲಿ ಇದು ಬರುವುದು ಇಲ್ಲವೂ ಗಮನಿಸುತ್ತೇನೆ.  ಸರ್ಕಾರದ ಗಮನಕ್ಕೆ ತಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ತರುವೆ ಎಂದು  ಕಂದಗಲ್ ಹನಮಂತರಾಯ ಟ್ರಸ್ಟ್‌ನ ಅಧ್ಯಕ್ಷ  ಜೆ.ಟಿ.ಪಾಟೀಲ ತಿಳಿಸಿದ್ದಾರೆ. 

ಗುಳೇದಗುಡ್ಡದ ಕಂದಗಲ್ ಹನಮಂತರಾಯರ ರಂಗಮಂದಿರದ ಕಟ್ಟಡದ ಜಾಗದಲ್ಲಿ ಮುಳ್ಳು ಕಂಟಿ ಬೆಳೆದಿರುವುದು
ಈ ಹಿಂದೆ ಕಟ್ಟಿದ ಕಟ್ಟಡ ಹಾಳಾಗಿದೆ. ಈಗ ₹25 ಲಕ್ಷದಲ್ಲೂ ರಂಗಮಂದಿರ ಪೂರ್ಣಗೊಳಿಸಿಲ್ಲ. ಸರ್ಕಾರ ಕೂಡಲೇ ಕ್ರಮವಹಿಸಬೇಕು
ಡಾ.ಭೀಮನಗೌಡ ಪಾಟೀಲ ಹಿರಿಯ ರಂಗಕರ್ಮಿ ಗುಳೇದಗುಡ್ಡ
ರಂಗಮಂದಿರದ ರಕ್ಷಣೆಗೆ ಒಬ್ಬರನ್ನು ನೇಮಿಸಲಾಗುವುದು ಮತ್ತು ಇಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು
ಎ.ಎಚ್.ಮುಜಾವರಮುಖ್ಯಾಧಿಕಾರಿ ಪುರಸಭೆಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.