ADVERTISEMENT

ಅನಧಿಕೃತ ಕ್ಲಬ್‌ ಹಾವಳಿ ಹೆಚ್ಚಳ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 14:51 IST
Last Updated 26 ಜುಲೈ 2023, 14:51 IST

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಕ್ಲಬ್‌ಗಳ ಹಾವಳಿ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಾನಂದ ಟವಳಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ರಾಂಪುರ ಬಳಿ ಹೊಲವೊಂದರಲ್ಲಿ ಶೆಡ್‌ಗಳನ್ನು ನಿರ್ಮಿಸಿ, ಇಸ್ಪೀಟ್‌ ಜೂಜಾಟ ಆಡಿಸಲಾಗುತ್ತಿದೆ. ನಗರದಲ್ಲಿಯೂ ಹಲವೆಡೆ ಅನಧಿಕೃತ ಕ್ಲಬ್‌ಗಳು ತಲೆ ಎತ್ತಿವೆ. ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಟೀಕಿಸಿದರು.

ನಗರದ ಹಲವೆಡೆ ಕೋಮು ಸೌಹಾರ್ದ ಕದಡುವಂತಹ ಗಲಾಟೆಗಳು ಮೇಲಿಂದ ಮೇಲೆ ಆಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ADVERTISEMENT

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬಿಜೆಪಿ ಸರ್ಕಾರವಿದ್ದಾಗ ಕೈಗೊಂಡಿರುವ ಹಲವಾರು ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಏಜೆನ್ಸಿ ನೇಮಕ ಸಾಧ್ಯವಾಗದ್ದರಿಂದ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕೂಡಲೇ ಎಲ್ಲ ಕಾಮಗಾರಿಗಳ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಕಾಮಗಾರಿಗಳ ಆರಂಭಕ್ಕೂ ಮುನ್ನ ಸಚಿವರ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಚಿವರ ಅನುಮೋದನೆ ಏಕೆ ಬೇಕು. ಕಮಿಷನ್‌ ವಸೂಲಿಗೆ ಹೀಗೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.

ಅಧಿವೇಶನದಿಂದ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದನ್ನು ಖಂಡಿಸಿದ ಅವರು, ಯುಕೆಪಿ ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.