ADVERTISEMENT

ಆಲಮಟ್ಟಿ ಜಲಾಶಯ ಎತ್ತರ 524 ಮೀ. ಏರಿಸಿ: ಹಣಮಂತ ನಿರಾಣಿ

ವಿಧಾನ ಪರಿಷತ್ತು ಸದಸ್ಯ ಹಣಮಂತ ನಿರಾಣಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:22 IST
Last Updated 30 ಮೇ 2025, 14:22 IST
ಹನಮಂತ ನಿರಾಣಿ
ಹನಮಂತ ನಿರಾಣಿ   

ಬೀಳಗಿ: ಹಲವು ವರ್ಷಗಳಿಂದ ನಿರಂತರವಾಗಿ ಆಲಮಟ್ಟಿ ಜಲಾಶಯ ಎತ್ತರಿಸುವ ಕುರಿತು ಅನೇಕ ಹೋರಾಟ, ಚರ್ಚೆಗಳು ನಡೆದಿವೆ. ಜಲಾಶಯವನ್ನು 524.256 ಮೀಟರ್ ಎತ್ತರ ಮಾಡಬೇಕು ಎನ್ನುವ ಉದ್ದೇಶವೇ ಸರ್ಕಾರ ಹೊಂದಬೇಕು. ಇದಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನು ಶೀಘ್ರಗತಿಯಲ್ಲಿ ಆರಂಭಿಸಬೇಕು’ ಎಂದು ವಿಧಾನ ಪರಿಷತ್ತಿನ ಸದಸ್ಯ ಹಣಮಂತ ನಿರಾಣಿ ಆಗ್ರಹಿಸಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವಾರ ವಿಜಯಪುರ ಜಿಲ್ಲೆ ಕೋಲಾರ ಪಟ್ಟಣದಲ್ಲಿನ ನಡೆದ ಸಮಾರಂಭದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಆಲಮಟ್ಟಿ ಜಲಾಶಯವನ್ನು 519.6ದಿಂದ 520.6 ಮೀಟರ್ ಮಾತ್ರ ಹೆಚ್ಚಳ ಮಾಡಬಹುದು ಎಂದರು. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಧ್ಯಯನ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದ್ದಾರೆ’ ಎಂದರು.

’ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಾಶಯ ಎತ್ತರವನ್ನು 522.256 ಮೀಟರ್‌ಗೆ ಹೆಚ್ಚಿಸುವ ಯೋಜನೆ ಹಾಕಿದಾಗ ವಿರೋಧಿಸಿದ್ದ ಕಾಂಗ್ರೆಸ್‌ನವರು, ಈಗ ಜಲಾಶಯ ಎತ್ತರಿಸುವ ವಿಚಾರ ಹೇಗೆ ಮಾಡುತ್ತಾರೆ? ಕಳೆದ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲಮಟ್ಟಿ ಜಲಾಶಯದ ಎತ್ತರ 524.256 ಮೀಟರ್‌ಗೆ ಹೆಚ್ಚಿಸಿ ಅದಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ತಗೆದುಕೊಳ್ಳುವ ಭರವಸೆ ನೀಡಿದ್ದರು. ಕೇವಲ ಒಂದು ಮೀಟರ್ ಎತ್ತರ ಮಾಡುವ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಕೇವಲ ಒಂದು ಮೀಟರ್ ಹೆಚ್ಚಳ ಮಾಡುವುದು ಎಂದರೆ ಹೇಗೆ? ಮತ್ತೆ ಭೂಸ್ವಾಧೀನ ಯಾವ ರೀತಿ ಆಗುವುದು? ಭೂಮಿ ಪರಿಹಾರ ಹೇಗೆ ನೀಡಲಾಗುವುದು ಎನ್ನುವುದನ್ನು ತಿಳಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಧಿಕ್ಕರಿಸಿ ಯೋಜನೆ ಹಂತ ಹಂತವಾಗಿ ಆರಂಭಿಸುವ ಕೆಲಸಕ್ಕೆ ಸಚಿವರು ಮುಂದಾಗಿದ್ದಾರೆ. ಇದು ಸಂತ್ರಸ್ತರನ್ನು ಆಂತಕಕ್ಕೀಡು  ಮಾಡಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಜಲಾಶಯವನ್ನು 524.256 ಮೀಟರ್ ಎತ್ತರಿಸಲು ಸುಪ್ರಿಂ ಕೋರ್ಟ್‌ನಲ್ಲಿರುವ ಪ್ರಕರಣಕ್ಕೆ ಬೇಕಿರುವ ಎಲ್ಲ ಅಗತ್ಯ ದಾಖಲೆ ನೀಡಬೇಕು. ಜಲಾಶಯ ಎತ್ತರಕ್ಕೆ ಆಗಬೇಕಿರುವ ಭೂ ಸ್ವಾಶೀನ, ಗ್ರಾಮಗಳ ಸ್ಥಳಾಂತರ ಜತೆಗೆ ಪುನರವಸತಿ ಕೇಂದ್ರಗಳ ಸ್ಥಾಪನೆ ಮಾಡಿ ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಪ್ರತಿ ಎಕರೆ ಒಣಬೇಸಾಯ ಭೂಮಿಗೆ ₹40 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಭೂಮಿಗೆ ₹50 ಲಕ್ಷ ಪರಿಹಾರ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.