ADVERTISEMENT

ಹೆಚ್ಚು ಶುಶ್ರೂಷಕರನ್ನು ರೂಪಿಸುತ್ತಿರುವ ಎರಡನೇ ದೇಶ ಭಾರತ

ಸಿಮ್ಯುಲೇಶನ್‌ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ದಿಲೀಪಕುಮಾರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:19 IST
Last Updated 20 ಜನವರಿ 2026, 6:19 IST
ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ. ದಿಲೀಪಕುಮಾರ ಉದ್ಘಾಟಿಸಿದರು
ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ. ದಿಲೀಪಕುಮಾರ ಉದ್ಘಾಟಿಸಿದರು   

ಬಾಗಲಕೋಟೆ: ವಿಶ್ವದಲ್ಲಿ ಅತಿ ಹೆಚ್ಚು ಪರಿಣತ ಶುಶ್ರೂಷಕರನ್ನು ರೂಪಿಸುತ್ತಿರುವ ಎರಡನೇ ದೇಶ ಭಾರತವಾಗಿದೆ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯಾಗಬೇಕು. ಆದ್ದರಿಂದ ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರದ ಬೆಳವಣಿಗೆಗಾಗಿ ಹೆಚ್ಚು ಹಣ ಹೂಡುವುದು ಅಗತ್ಯವಾಗಿದೆ ಎಂದು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ. ದಿಲೀಪಕುಮಾರ ಹೇಳಿದರು.

ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ರೆಫರೆನ್ಸ್ ಸಿಮ್ಯುಲೇಶನ್ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರ್ಸಿಂಗ್ ವೃತ್ತಿಪರರನ್ನು ಹೆಚ್ಚಿನ ಸಂಖ್ಯೆಯಲ್ಲಿ ರೂಪಿಸುತ್ತಿದ್ದರೂ ಇಲ್ಲಿ ರೋಗಿಗಳು ಮತ್ತು ಶುಶ್ರೂಷಕರ ಅನುಪಾತ ಇಳಿಮುಖವಾಗಿದೆ. ಈ ಸಂಖ್ಯೆ ಭವಿಷ್ಯದಲ್ಲಿ ಹೆಚ್ಚಬೇಕು. ಜೊತೆಗೆ ನರ್ಸಿಂಗ್ ವೃತ್ತಿಪರರಿಗೆ ತರಬೇತಿಯ ಅವಶ್ಯಕತೆ ಇದೆ. ಸಿಮ್ಯುಲೇಶನ್ ಕೇಂದ್ರಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು ಎಂದರು.

ADVERTISEMENT

ಅತಿಥಿಯಾಗಿದ್ದ ಭಾರತೀಯ ನರ್ಸಿಂಗ್ ಮಂಡಳಿ ಮಾಜಿ ಅಧ್ಯಕ್ಷ ಡಾ.ಆಶಾ ಶರ್ಮಾ ಮಾತನಾಡಿ, ಸಿಮ್ಯುಲೇಶನ್ ಕೇಂದ್ರದಲ್ಲಿ ತರಬೇತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೆಚ್ಚಿನ ತರಬೇತಿ ಅವಶ್ಯವಾಗಿದೆ ಎಂದು ಹೇಳಿದರು.

ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಮಾತನಾಡಿ, ಶಿಕ್ಷಣ ಬೆಳವಣಿಗೆಯಲ್ಲಿ ಬಿವಿವಿ ಸಂಘದ ಕೊಡುಗೆ ಮಹತ್ವದ್ದಾಗಿದೆ. ಹಲವು ದಶಕಗಳಿಂದ ಗುಣಾತ್ಮಕ ಶಿಕ್ಷಣದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದೆ ಎಂದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ದೇಶದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸಿಂಗ್ ವೃತ್ತಿಪರರು ಈ ಸಿಮ್ಯುಲೇಶನ್ ಕೇಂದ್ರದಲ್ಲಿ ತರಬೇತಿ ಪಡೆಯಬಹುದಾಗಿದೆ. ಗುಣಾತ್ಮಕ ಶಿಕ್ಷಣದ ಮೂಲಕ ಸಮಾಜದ ಬೆಳವಣಿಗೆ ಮುಖ್ಯ ಉದ್ದೇಶವಾಗಿದೆ ಎಂದರು.

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.