ಹುನಗುಂದ: ನಮ್ಮ ದೇಶದ ಸೈನ್ಯ ಜಗತ್ತಿನಲ್ಲಿ ಬಲಿಷ್ಠವಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠ ಇಳಕಲ್ ಗುರುಮಾಹಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಓಂ ಶಾಂತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಸೇವೆಯಿಂದ ನಿವೃತ್ತಿ ಹೊಂದಿದ ಯೋಧ ಮಂಜುನಾಥ ಅಂಗಡಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಮ್ಮು ಕಾಶ್ಮೀರ್ ಸೇರಿದಂತೆ ವಿವಿಧೆಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸೈನಿಕನ ಕಾರ್ಯ ಅವಿಸ್ಮರಣೀಯ. ಗಡಿಯಲ್ಲಿ ಸೇವೆ ಸಲ್ಲಿಸುವಾಗ ಸೈನಿಕರು ಪ್ರತಿಕ್ಷಣ ಜಾಗ್ರತೆಯಿಂದ ಇರಬೇಕಾಗುತ್ತದೆ. ದೇಶ ಸೇವೆಯ ನಂತರ ತಂದೆ-ತಾಯಿಗಳ ಸೇವೆ ಮಾಡಿ ಎಂದರು.
ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಭಾರತಾಂಬೆ ಸೇವೆ ಸಲ್ಲಿಸಿ ಯೋಧ ಇಂದು ನಾಡಿಗೆ ಬಂದಿದ್ದಾರೆ. ಈಗ ನಾವೆಲ್ಲರೂ ಸುರಕ್ಷಿತವಾಗಿರಲೂ ಸೈನಿಕರ ಸೇವೆ ಕಾರಣ. ದೇಶದ ಗಡಿ ಕಾಯುವ ಸೈನಿಕ ಹಾಗೂ ಕೃಷಿ ಕಾಯಕ ಮಾಡುವ ರೈತ ಇಬ್ಬರ ಕಾರ್ಯ ಶ್ರೇಷ್ಠ ವಾದದ್ದು, ಅವರ ಸಂಕಷ್ಟದಲ್ಲಿ ಪ್ರತಿಯೊಬ್ಬರೂ ಸಹಾಯ ಮಾಡಬೇಕು ಎಂದರು.
ಸೇವೆಯಿಂದ ನಿವೃತ್ತ ಹೊಂದಿದ ಸೈನಿಕನನ್ನು ಇನ್ನಿತರ ಪಟ್ಟಣದ ಬಸವ ಮಂಟಪದಿಂದ ಚನ್ನಮ್ಮ ವೃತ್ತ, ಲಿಂಗದ ಕಟ್ಟೆ, ಮುಖ್ಯ ಬಜಾರ್ ಹಾಗೂ ವಿಜಯ ಮಹಾಂತೇಶ ವೃತ್ತ ಸೇರಿದಂತೆ ವಿವಿಧೆಡೆ ಮೆರವಣಿಗೆ ಮಾಡಲಾಯಿತು. ತೆರದ ವಾಹನವನ್ನು ತ್ರಿವರ್ಣ ಧ್ವಜ ಹಾಗೂ ನಾಡ ಧ್ವಜ, ಬಲೂನ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ಸಿಂಗಾರಿಸಲಾಗಿತ್ತು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ, ನಾಗಪ್ಪ ಆಲೂರು, ಶಿವಾನಂದ ನಿರ್ವಾಲಿ, ಸಂಗಪ್ಪ ಕಲಾದಗಿ, ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ, ವಿರುಪಾಕ್ಷಪ್ಪ ಪಲ್ಲೆದ, ಅಮರೇಶ ಅಂಗಡಿ, ಗಂಗಮ್ಮ ಬಾರಕೇರ, ಪ್ರಸನ್ನ ಇಲಕಲ್ಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.