ADVERTISEMENT

ಯಡಹಳ್ಳಿ ವನ್ಯಧಾಮ: ಚಿಂಕಾರಗಳ ಸಂಖ್ಯೆ ಹೆಚ್ಚಳ

ದಕ್ಷಿಣ ಭಾರತದಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಪ್ರಾಣಿ

ವೆಂಕಟೇಶ ಜಿ.ಎಚ್.
Published 6 ಫೆಬ್ರುವರಿ 2022, 21:12 IST
Last Updated 6 ಫೆಬ್ರುವರಿ 2022, 21:12 IST
ಬೀಳಗಿ ತಾಲ್ಲೂಕು ಯಡಹಳ್ಳಿಯ ವನ್ಯಜೀವಿ ಧಾಮದಲ್ಲಿ ಕ್ಯಾಮೆರಾಗೆ ಸೆರೆಸಿಕ್ಕ ಚಿಂಕಾರ ಜೋಡಿ ---–ಚಿತ್ರ: ಹಣಮಂತ ಡೋಣಿ
ಬೀಳಗಿ ತಾಲ್ಲೂಕು ಯಡಹಳ್ಳಿಯ ವನ್ಯಜೀವಿ ಧಾಮದಲ್ಲಿ ಕ್ಯಾಮೆರಾಗೆ ಸೆರೆಸಿಕ್ಕ ಚಿಂಕಾರ ಜೋಡಿ ---–ಚಿತ್ರ: ಹಣಮಂತ ಡೋಣಿ   

ಬಾಗಲಕೋಟೆ: ಇಲ್ಲಿನ ಬೀಳಗಿ ತಾಲ್ಲೂಕು ಯಡಹಳ್ಳಿ ವನ್ಯಧಾಮದಲ್ಲಿ ಚಿಂಕಾರಗಳ (Indian gazelle) ಸಂಖ್ಯೆ ಹೆಚ್ಚಳಗೊಂಡಿದೆ. ದಕ್ಷಿಣ ಭಾರತದಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಈ ಮುದ್ದು ಮಿಕದ ಸಂಖ್ಯೆ ವೃದ್ಧಿಯಾಗಿರುವುದು ಅರಣ್ಯ ಇಲಾಖೆ ಸಂತಸಕ್ಕೆ ಕಾರಣವಾಗಿದೆ.

ಕೊಯಮತ್ತೂರಿನಲ್ಲಿರುವ ಕೇಂದ್ರ ಸರ್ಕಾರದ ಡಾ.ಸಲೀಂ ಅಲಿ ಪಕ್ಷಿಶಾಸ್ತ್ರ ಹಾಗೂ ಪ್ರಾಕೃತಿಕ ಇತಿಹಾಸ ಅಧ್ಯಯನ ಸಂಸ್ಥೆಯ ವಿಜ್ಞಾನಿ, ಚಿಕ್ಕಮಗಳೂರಿನ ಡಾ.ಎಚ್.ಎನ್.ಕುಮಾರ್ ನೇತೃತ್ವದ ತಂಡ ಯಡಹಳ್ಳಿ ವನ್ಯಧಾಮದಲ್ಲಿ ಮೂರು ತಿಂಗಳು ಅಧ್ಯಯನ ನಡೆಸಿ ಚಿಂಕಾರಗಳ ವಂಶಾಭಿವೃದ್ಧಿ ಗುರುತಿಸಿದೆ. ಅರಣ್ಯ ಇಲಾಖೆ ಮನವಿ ಮೇರೆಗೆ ಈ ತಂಡ ಗಣತಿ ನಡೆಸಿತ್ತು.

ಬೀಳಗಿ, ಮುಧೋಳ ತಾಲ್ಲೂಕುಗಳ 9,636 ಹೆಕ್ಟೇರ್ ಪ್ರದೇಶದಲ್ಲಿವ್ಯಾಪಿಸಿರುವ ಯಡಹಳ್ಳಿ ವನ್ಯಜೀವಿಧಾಮದಲ್ಲಿ 72 ಕಡೆ ವೀಕ್ಷಣಾ ಗೋಪುರ ನಿರ್ಮಿಸಿ, ತಲಾ ಐದು ಕ್ಯಾಮೆರಾ ಅಳವಡಿಸಿ ಟ್ರ್ಯಾಪಿಂಗ್ ಮಾಡಲಾಗಿದೆ. ಅವುಗಳ ಹೆಜ್ಜೆ, ಹಿಕ್ಕೆ ಗುರುತು, ಚಲನವಲನ ಆಧರಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗಿದೆ.

ADVERTISEMENT

ಏಳು ಚಿಂಕಾರ ಹೆಚ್ಚಳ: ಕೃಷ್ಣಾ ತೀರದಲ್ಲಿ ಕಾಣಸಿಕ್ಕಿದ ಈ ಅಪರೂಪದ ಪ್ರಾಣಿಗಳ ರಕ್ಷಣೆಗೆ ಸರ್ಕಾರ 2016ರಲ್ಲಿ ಯಡಹಳ್ಳಿ ವನ್ಯಜೀವಿ ಧಾಮಕ್ಕೆ ಅಧಿಸೂಚನೆ ಹೊರಡಿಸಿದ್ದು, ಆಗ 85 ಚಿಂಕಾರಗಳ ಗುರುತಿಸಲಾಗಿತ್ತು. ಈಗ ಆ ಸಂಖ್ಯೆ 92ಕ್ಕೆ ಹೆಚ್ಚಳವಾಗಿದೆ. ಗಂಡು ಹಾಗೂ ಹೆಣ್ಣು ಚಿಂಕಾರ ಅನುಪಾತ 1:0.83ರಷ್ಟು ಕಂಡುಬಂದಿದೆ.

‘ನೀಲಗಾಯ್, ಕೃಷ್ಣಮೃಗದ ರೀತಿ ಚಿಂಕಾರವು ಗೊರಸುಳ್ಳ ಪ್ರಾಣಿ. ಉತ್ತರ ಭಾರತದಲ್ಲಿ ರಾಜಸ್ಥಾನ, ಗುಜರಾತ್‌ನಲ್ಲಿ ಕಾಣಸಿಗುತ್ತದೆ. ಕುರುಚಲು ಅರಣ್ಯಪ್ರದೇಶದ ಗುಡ್ಡ–ಬೆಟ್ಟಗಳ ತುದಿಯಲ್ಲಿ (Table top) ವಾಸ ಮಾಡುವ ಚಿಂಕಾರ, ನಾಚಿಕೆ ಸ್ವಭಾವದ ಪ್ರಾಣಿ. ಕಿ.ಮೀಗಟ್ಟಲೇ ದೂರದಿಂದ ಮನುಷ್ಯರ ವಾಸನೆ ಗ್ರಹಿಸಿ ದೂರಸರಿಯುತ್ತದೆ. ಹೀಗಾಗಿ ಜನರಿಗೆ ಗೋಚರಿಸುವುದು ಅಪರೂಪ’ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಹಣಮಂತ ಡೋಣಿ ಹೇಳುತ್ತಾರೆ.

ರಾಜ್ಯದಲ್ಲಿ ಯಡಹಳ್ಳಿ ವನ್ಯಧಾಮ ಬಿಟ್ಟರೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಭಾಗದಲ್ಲಿ ಬೆರಳೆಣಿಕೆಯಷ್ಟು ಚಿಂಕಾರ ಕಂಡುಬಂದಿವೆ.ಯಡಹಳ್ಳಿ ವನ್ಯಜೀವಿಧಾಮ ಘೋಷಣೆ ನಂತರ ಅರಣ್ಯ ಇಲಾಖೆ ಈ ಭಾಗದಲ್ಲಿ ಬೇಟೆ ನಿಷೇಧಿಸಿತ್ತು. ಸುತ್ತಲಿನ 12 ಹಳ್ಳಿಗಳ ಜನರು ಕಟ್ಟಿಗೆಗೆ ಕಾಡಿಗೆ ಹೋಗುವುದನ್ನು ತಪ್ಪಿಸಲು ಅವರ ಮನೆಗಳಿಗೆ ಇಲಾಖೆಯಿಂದಲೇ ಎಲ್‌ಪಿಜಿ ಸಿಲಿಂಡರ್ ಸೌಲಭ್ಯ ಕಲ್ಪಿಸಲಾಗಿತ್ತು.

ಕತ್ತೆಕಿರುಬದ ಹೆಜ್ಜೆ ಗುರುತು..

ಯಡಹಳ್ಳಿ ವನ್ಯಜೀವಿ ಧಾಮದಲ್ಲಿ ಚಿಂಕಾರ ಅಧ್ಯಯನಕ್ಕೆ ನಡೆಸಿದ ಕ್ಯಾಮೆರಾ ಟ್ರ್ಯಾಪಿಂಗ್‌ ವೇಳೆ ನಿಸರ್ಗದಲ್ಲಿ ಇರುಳ ಹಾದಿಯ ಜಾಡಮಾಲಿ ಕತ್ತೆಕಿರುಬ (Hyna) ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಕ್ಕಿವೆ.ತೋಳ, ನರಿ, ಗುಳ್ಳೆ ನರಿ, ಮುಳ್ಳುಹಂದಿ, ಕಾಡುಹಂದಿ, ಚಿಪ್ಪು ಹಂದಿ, ಮೊಲ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.