
ರಬಕವಿ ಬನಹಟ್ಟಿ: ನಗರದಲ್ಲಿ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 15 ತಿಂಗಳ ಹಿಂದೆ ರಬಕವಿ ಬನಹಟ್ಟಿ ಸಮುದಾಯ ಕೇಂದ್ರದ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಯಾವಾಗ ಪೂರ್ಣವಾಗುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ವರ್ಷದ ಹಿಂದೆ ಬೃಹತ್ ಕ್ರೇನ್‌ಗಳ ಮೂಲಕ ಗೋಡೆ ಮತ್ತು ಚಾವಣಿ ಅಳವಡಿಸುವ ಕಾರ್ಯ ನಡೆದಿತ್ತು. ನಾಲ್ಕು ತಿಂಗಳ ನಂತರ ಬಾಗಿಲು, ವಿದ್ಯುತ್ ವಿದ್ಯುತ್ ಸಾಧನ ಅಳವಡಿಸುವ ಕಾರ್ಯವೂ ನಡೆಯಿತು. ಕ್ಯಾಂಟೀನ್ ಸುತ್ತಲೂ ಕಾಂಪೌಂಡ್ ಹಾಗೂ ಕಟ್ಟೆ ನಿರ್ಮಾಣ ಕಾರ್ಯ ಸಹ ನಡೆದಿದೆ.
ಸಾರ್ವಜನಿಕರಿಗೆ ಪ್ರಯೋಜನಕಾರಿಯಾದ ‘ಇಂದಿರಾ ಕ್ಯಾಂಟೀನ್’ ನಿರ್ಮಾಣಕ್ಕೆ ಇಷ್ಟೊಂದು ಸಮಯ ಬೇಕೇ? ಕ್ಯಾಂಟೀನ್ ನಿರ್ಮಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದೇ? ಎಂಬುದು ಹಲವರ ಪ್ರಶ್ನೆಯಾಗಿದೆ. ಕಾಮಗಾರಿ ಯಾವಾಗ ಪೂರ್ಣಗೊಳ್ಳಬೇಕಿತ್ತು ಎಂಬ ಬಗ್ಗೆ ಅಧಿಕಾರಿಗಳ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲವಾಗಿದೆ.
‘ಬಡವರಿಗೆ ಶೀಘ್ರದಲ್ಲೇ ಕಡಿಮೆ ದರದಲ್ಲಿ ಆಹಾರ ದೊರೆಯುವ ವಿಶ್ವಾಸ ಇಲ್ಲದಂತಾಗಿದೆ. ಕ್ಯಾಂಟೀನ್ ನಿರ್ಮಾಣದ ಹಲವಾರು ಕೆಲಸಗಳು ಉಳಿದುಕೊಂಡಿವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಶ‍್ರೀಶೈಲ ಬೀಳಗಿ.
‘ಕೇವಲ ಪ್ರಚಾರಕ್ಕಾಗಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಆದಷ್ಟು ಬೇಗ ಕಟ್ಟಡ ನಿರ್ಮಿಸಿ, ಬಡವರಿಗೆ ಆಹಾರ ದೊರೆಯುವಂತೆ ಮಾಡಬೇಕು’ ಎಂದು ಶಿವಾನಂದ ಗಾಯಕವಾಡ ಒತ್ತಾಯಿಸಿದರು.
ನಿಧಾನ ಗತಿಯಲ್ಲಿ ಕಾಮಗಾರಿ ಬಡವರ ಹಸಿವು ನೀಗಿಸುವಲ್ಲಿ ವಿಳಂಬ ಕೇವಲ ಪ್ರಚಾರಕ್ಕಾಗಿ ಕ್ಯಾಂಟೀನ್; ಆರೋಪ
ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿರುವುದರಿಂದ ಸಮುದಾಯಆರೋಗ್ಯ ಕೇಂದ್ರಕ್ಕೂ ತೊಂದರೆಯಾಗಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಕ್ರಮ ವಹಿಸಲಿಸಿದ್ದು ಸವದಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.