ADVERTISEMENT

ಬಾಗಲಕೋಟೆ: ಆರಂಭವಾಗದ ಇಂದಿರಾ ಕ್ಯಾಂಟೀನ್ 

ಸ್ಥಳ ನಿಗದಿ ಮಾಡಿ ಪ್ರಸ್ತಾವ ಸಲ್ಲಿಕೆ: ಸರ್ಕಾರದಿಂದ ಈವರೆಗೆ ಬಾರದ ಉತ್ತರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:27 IST
Last Updated 21 ಜೂನ್ 2025, 6:27 IST
ಮಹಾಲಿಂಗಪುರದ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್‍ಗೆ ಗುರುತಿಸಲಾದ ಸ್ಥಳ
ಮಹಾಲಿಂಗಪುರದ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್‍ಗೆ ಗುರುತಿಸಲಾದ ಸ್ಥಳ   

ಮಹಾಲಿಂಗಪುರ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ಒದಗಿಸುವ ಉದ್ದೇಶ ಹೊಂದಿರುವ ‘ಇಂದಿರಾ ಕ್ಯಾಂಟೀನ್’ ಯೋಜನೆಯು ರಾಜ್ಯದಾದ್ಯಂತ ಜಾರಿಗೆ ಬಂದು 7 ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಮಾತ್ರ ಇಂದಿಗೂ ಈ ಸೌಲಭ್ಯ ಪ್ರಾರಂಭವಾಗಿಲ್ಲ.

ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯದಲ್ಲೂ ಕಡಿಮೆ ದರದಲ್ಲಿ ಆಹಾರ ಒದಗಿಸಲು 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕಿ ದಿ.ಇಂದಿರಾಗಾಂಧಿ ಹೆಸರಿನಲ್ಲಿ ‘ಇಂದಿರಾ ಕ್ಯಾಂಟೀನ್’ ಆರಂಭಿಸಿದ್ದರು. ಆದರೆ, ಪಟ್ಟಣದ ಜನತೆಗೆ ಇನ್ನೂ ಈ ಯೋಜನೆ ಮರೀಚಿಕೆ ಆಗಿದೆ.

ಮಂಜೂರಾಗದೇ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ವಿಸ್ತರಿಸಲು 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿ 2023ರ ಅ.10 ರಂದು  ಪುರಸಭೆ ವ್ಯಾಪ್ತಿಯ ಬಸ್ ನಿಲ್ದಾಣದ ಹತ್ತಿರ ಪುರಸಭೆ ಅಧ್ಯಕ್ಷರ ಹೆಸರಿನಲ್ಲಿರುವ 1289ಎ ಸರ್ವೇಯಲ್ಲಿನ 60*40 ಚ.ಮೀ ಅಳತೆಯ ಖಾಲಿ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಸ್ಥಳ ನಿಗದಿ ಪಡಿಸಿ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಈ ಪ್ರಸ್ತಾವಕ್ಕೆ ಇದುವರೆಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.

ADVERTISEMENT

ಕೇವಲ ₹5ಕ್ಕೆ ಉಪಾಹಾರ ಮತ್ತು ₹10ಕ್ಕೆ ಊಟ ಒದಗಿಸುವುದು, ಆ ಮೂಲಕ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಕಡಿಮೆ ಆದಾಯ ಹೊಂದಿರುವ ಜನರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ಯೋಜನೆ ಇದಾಗಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಕೇಂದ್ರ ಸ್ಥಾನವಾಗಿರುವ ಮಹಾಲಿಂಗಪುರಕ್ಕೆ ನಿತ್ಯ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಇವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಸಿಗುವುದು ಅಗತ್ಯವಿದೆ. ಹೀಗಿದ್ದರೂ, ಪಟ್ಟಣದಲ್ಲಿ ಈ ಯೋಜನೆಯು ಅನುಷ್ಠಾನವಾಗದೇ ಇರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಇಂದಿರಾ ಕ್ಯಾಂಟಟೀನ್ ಆರಂಭಕ್ಕೆ ಬೇಕಾದ ಸ್ಥಳ ಗುರುತಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಅಗತ್ಯವೆನಿಸಿದರೆ ಬೇರೆ ಸ್ಥಳ ನೀಡಲಾಗುವುದು. ಸರ್ಕಾರ ಮಂಜೂರಾತಿ ನೀಡಬೇಕಿದೆ.
– ಈರಣ್ಣ ದಡ್ಡಿ, ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.