ADVERTISEMENT

ಬಾಗಲಕೋಟೆ: ಮೂಲ ಸೌಲಭ್ಯ ನಿರ್ವಹಣೆಗೆ ನಿರ್ಲಕ್ಷ್ಯ

ಜಿಲ್ಲಾ ಕೇಂದ್ರದ ಮಗ್ಗುಲಲ್ಲೇ ಇರುವ ಹೊನ್ನಾಕಟ್ಟಿ

ಪ್ರಕಾಶ ಬಾಳಕ್ಕನವರ
Published 15 ಜೂನ್ 2025, 5:53 IST
Last Updated 15 ಜೂನ್ 2025, 5:53 IST
ರಾಂಪುರ ಸಮೀಪದ ಹೊನ್ನಾಕಟ್ಟಿ ಗ್ರಾಮದ ಓಣಿಯ ರಸ್ತೆಯಲ್ಲಿ ನೀರು ಹರಿಯಿತು
ರಾಂಪುರ ಸಮೀಪದ ಹೊನ್ನಾಕಟ್ಟಿ ಗ್ರಾಮದ ಓಣಿಯ ರಸ್ತೆಯಲ್ಲಿ ನೀರು ಹರಿಯಿತು   

ರಾಂಪುರ: ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ ಅನತಿ ದೂರದಲ್ಲಿರುವ ಹೊನ್ನಾಕಟ್ಟಿ ಗ್ರಾಮದಲ್ಲಿ ಮೂಲಸೌಲಭ್ಯಗಳಿಗೆ ಕೊರತೆಯಿಲ್ಲವಾದರೂ, ಅವುಗಳ ಸದ್ಬಳಕೆ ಆಗಿಲ್ಲ ಎನ್ನುವುದಕ್ಕೆ ಇಲ್ಲಿನ ಪ್ರತಿ ಓಣಿಗಳಲ್ಲಿ ಕಂಡು ಬರುವ ಅವ್ಯವಸ್ಥೆಯೇ ಸಾಕ್ಷಿ.

ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತವನ್ನು ದೂರುವ ಗ್ರಾಮಸ್ಥರು, ಎಲ್ಲ ಕಡೆಗಳಲ್ಲೂ ಸಿ.ಸಿ ರಸ್ತೆ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿ ಬಹುತೇಕ ಮನೆಗಳ ಚರಂಡಿ ನೀರು ರಸ್ತೆಗೆ ಹರಿಯಬಿಟ್ಟಿದ್ದಾರೆ. ಹೀಗಾಗಿ ಓಣಿಗಳಲ್ಲಿ ಸದಾ ಕಾಲ ನೀರು ಹರಿಯುವುದರಿಂದ ಮಕ್ಕಳು, ವಯೋವೃದ್ಧರು, ಅದರಲ್ಲೂ ಶಾಲಾ ಮಕ್ಕಳು ಅದೇ ನೀರಿನಲ್ಲಿ ಸಂಚರಿಸಬೇಕಾದ ಅನಿವಾರ್ಯ ಎದುರಾಗಿದೆ.

ADVERTISEMENT

ಜನರಿಂದಲೇ ವ್ಯವಸ್ಥೆ ಹಾಳು: ಕೆಲವು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಯವರು ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಾದರೂ ರಜಾ ದಿನಗಳಲ್ಲಿ ಕಿಡಿಗೇಡಿಗಳು ನಳದ ಪೈಪ್‌ಲೈನ್ ಕಿತ್ತು ಹಾಕಿ, ನೀರು ಸರಬರಾಜು ಆಗದಂತೆ ಮಾಡಿದ್ದರಿಂದಾಗಿ ಮಕ್ಕಳಿಗೆ ಕುಡಿಯುವ ನೀರಿಗೆ ಹಾಗೂ ಬಿಸಿ ಊಟ ತಯಾರಿಕೆಗೆ ತೊಂದರೆಯಾಗಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರು ಹಾಗೂ ಶಿಕ್ಷಕಿಯರಿಗೆ ಶೌಚಾಲಯದ ಕೊರತೆ ಇದೆ. 7ನೇ ತರಗತಿಯವರೆಗೆ 165 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ನಾಲ್ವರು ಶಿಕ್ಷಕರು ಮಾತ್ರ ಇದ್ದಾರೆ. ಹೀಗಾಗಿ ಶಿಕ್ಷಕರ ಕೊರತೆಯೂ ಇದೆ.

‘ಗ್ರಾಮದ ಕೆಲವು ಓಣಿಗಳಲ್ಲಿ ಸಿಸಿ ರಸ್ತೆಗಳಾಗಬೇಕಿದೆ. ಈಗಾಗಲೇ ಆಗಿರುವ ಸಿಸಿ ರಸ್ತೆಗಳು ಕೆಲವೆಡೆ ಕಿತ್ತು ಹೋಗಿದ್ದು, ಅವುಗಳ ದುರಸ್ತಿಯ ಆಗಬೇಕಿದೆ. ನೀರಿನ ಸೌಲಭ್ಯ ಸಾಕಷ್ಟಿದ್ದು, ಅದನ್ನು ಮಿತವಾಗಿ ಬಳಸಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಅರಿವು ಸಾರ್ವಜನಿಕರಲ್ಲೂ ಮೂಡಬೇಕಿದೆ. ಮನೆಗಳ ಮುಂದೆ ರಸ್ತೆಯಲ್ಲಿ ಕಸ ಹಾಕಬಾರದು. ಇಂಗು ಗುಂಡಿ ಮಾಡಿಕೊಂಡು ಮೋರಿಯ ನೀರು ರಸ್ತೆಗೆ ಬಿಡುವುದನ್ನು ನಿಲ್ಲಿಸಬೇಕು’ ಎನ್ನುತ್ತಾರೆ ಗ್ರಾಮದ ಯುವಕ ಮಾರುತಿ.

ರಾಂಪುರ ಸಮೀಪದ ಹೊನ್ನಾಕಟ್ಟಿ ಗ್ರಾಮದ ಓಣಿಯ ರಸ್ತೆಯಲ್ಲಿ ನೀರು ಹರಿಯಿತು
ಶಾಲೆಯ ನೀರಿನ ಪೈಪಲೈನ್ ದುರಸ್ತಿ ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತಿದೆ. ಜೂನ್ 17ರಿಂದ ಊರಿನ ಸ್ವಚ್ಛತೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
– ಆರ್.ಎಚ್. ನದಾಫ, ಮುಗಳೊಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.