ADVERTISEMENT

ಶೋಷಿತರಿಗೆ ನ್ಯಾಯ ಕೊಡಿ: ಕಾರಜೋಳ

ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ; ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:16 IST
Last Updated 2 ಆಗಸ್ಟ್ 2025, 4:16 IST
ಬಾಗಲಕೋಟೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು
ಬಾಗಲಕೋಟೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು   

ಬಾಗಲಕೋಟೆ: ಶೋಷಿತರ ಬಗ್ಗೆ ಕಾಳಜಿ ಇದ್ದರೆ, ಒಳ ಮೀಸಲಾತಿ ಜಾರಿಗೊಳಿಸಬೇಕು. ಕಾಲಹರಣ ಮಾಡಿದ ಕೂಡಲೇ ನ್ಯಾಯ ಒದಗಿಸಬೇಕು ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಒಕ್ಕೂಟದಿಂದ ಶುಕ್ರವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೊಳಿಸಿ ಎಂದು ಸುಪ್ರೀಂ ಕೋರ್ಟ್‌ ಹೇಳಿ ವರ್ಷವಾಗಿದೆ. ಆದರೂ, ಇಂದಿನವರೆಗೆ ಜಾರಿಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟದಲ್ಲಿಯೇ ಒಳ ಮೀಸಲಾತಿ ನೀಡಲಾಗುವುದು ಎಂದು ಕಾಂಗ್ರೆಸ್‌ ಹೇಳಿತ್ತು. ಎರಡು ವರ್ಷಗಳಾದರೂ ಜಾರಿಗೊಳಿಸಿಲ್ಲ. ಕುಂಟು ನೆಪಗಳನ್ನು ಹೇಳಿಕೊಂಡು ಮುಂದೆ ಹಾಕುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ADVERTISEMENT

ವಿಧಾನಮಂಡಲ ಅಧಿವೇಶನದಲ್ಲಿ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ, ಆ.16ರಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಅವರೇ ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಂಡರೆ ಸಾಲದು, ಒಳ ಮೀಸಲಾತಿ ಜಾರಿಗೊಳಿಸಬೇಕು ಸಾಮಾಜಿಕ ಕಳಕಳಿ ಇರಬೇಕು. ಇಲ್ಲದಿದ್ದರೆ, ಹಿಂದುಳಿದ ನಾಯಕ ಎಂದು ಜನರು ಒಪ್ಪಿಕೊಳ್ಳುವುದಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ, ಪಿಎಂ ಮಾಡಲಿಲ್ಲ ಎಂದು ನಿಮ್ಮದೇ ನೋಡಿಕೊಳ್ಳುತ್ತಾ ಕೂಡಬೇಡಿ. ಶೋಷಿತ ಜನರಿಗೆ ನ್ಯಾಯ ಕೊಡಿಸಿ. ಕಾಂಗ್ರೆಸ್‌ನಲ್ಲಿ ನಿಮಗೆ ಅಧಿಕಾರ ನೀಡುವುದಿಲ್ಲ ಎಂದು ಹೇಳಿದರು.

ಸಮಗಾರ ಹರಳಯ್ಯ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ ಮಾತನಾಡಿ, ಮಾಧುಸ್ವಾಮಿ ವರದಿ ಪ್ರಕಾರ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಅರುಣ ಕಾರಜೋಳ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಳಿ, ಯಲ್ಲಪ್ಪ ನಾರಾಯಣಿ, ಸಚಿನ್‌ ಕೊಡತೆ, ರಾಮ ಕದಂ,  ಭರಮಾರಡ್ಡಿ ಹೊಸಮನಿ, ಯಮನೂರ ಮೂಲಂಗಿ, ಭೀಮಶಿ ಗೌಂಡಿ, ಪರುಶರಾಮ ಬಸವಗೋಳ, ಯಮನಪ್ಪ ದಳಪತಿ, ಹನಮಂತ ಚಿಮ್ಮಲಗಿ, ಕಾಂತಿಚಂದ್ರ ಜ್ಯೋತಿ, ಸಿದ್ದು ಮಾದರ ಮತ್ತಿತರರು ಇದ್ದರು.

ಕಾಂಗ್ರೆಸ್‌ಗೆ ಬದ್ಧತೆ ಇಲ್ಲ ಬಾಗಲಕೋಟೆ: ಕಾಂಗ್ರೆಸ್‌ ನಾಯಕರು ಬದ್ಧತೆ ಹೊಂದಿಲ್ಲ. ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಮುತ್ತಣ್ಣ ಬೆಣ್ಣೂರ  ಟೀಕಿಸಿದರು. ಸದಾಶಿವ ಆಯೋಗ ವರದಿ ಶೇ 15ರಷ್ಟಿತ್ತು. ಈಗ ಮಾಧುಸ್ವಾಮಿ ವರದಿ ಪ್ರಕಾರ ಶೇ 17ರಷ್ಟಾಗಿದೆ. ಅದರ ಪ್ರಕಾರವೇ ಒಳ ಮೀಸಲಾತಿ ನೀಡಬೇಕು. ನ್ಯಾಯಾಲಯ ಹೇಳಿದ್ದರೂ ಕಾಲಹರಣ ಮಾಡಲಾಗುತ್ತಿದೆ. ನೇಮಕಾತಿ ಆಗದ್ದರಿಂದ ನಿರುದ್ಯೋಗ ಹೆಚ್ಚಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.