
ಬಾಗಲಕೋಟೆ: ಕಪ್ಪು ನುಸಿ, ಕಳೆ ನಿಯಂತ್ರಣ, ಅಂತರ ಬೇಸಾಯ ಪದ್ಧತಿಯಂತಹ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ನವದೆಹಲಿ ಐಸಿಎಸ್‍ಆರ್ ಮಾಜಿ ಡಿಡಿಜಿ ಎನ್.ಕೆ. ಕೃಷ್ಣಕುಮಾರ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೆಣಸಿನಕಾಯಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಜೈವಿಕ ಮತ್ತು ಅಜೈವಿಕ ಒತ್ತಡಗಳ ನಿರ್ವಹಣೆ ಕುರಿತು ಮಾತನಾಡಿದ ಅವರು, ಗೊಬ್ಬರ, ನೀರಿನ ನಿರ್ವಹಣೆ, ಬೇವಿನ ಹಿಂಡಿ ಬಳಕೆ ಬಗೆಗೆ ಮಾಹಿತಿ ಒದಗಿಸಿದರು.
ಬೆಂಗಳೂರು ತೋಟಗಾರಿಕೆ ಕಾಲೇಜಿನ ಸಹಪ್ರಾಧ್ಯಾಪಕ ಕೆ.ಎಸ್. ಶಂಕರಪ್ಪ ಮಾತನಾಡಿ, ವೈರಸ್ ರೋಗ ನಿರ್ವಹಣೆ, ಮೆಣಸಿನಕಾಯಿ ಬೆಳೆಗಳಲ್ಲಿ ವೈರಸ್ ಸೋಂಕುಗಳು ರಫ್ತು ಗುಣಮಟ್ಟವನ್ನು ಹಾಳು ಮಾಡುವ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವೈರಸ್ ರೋಗಗಳ ತ್ವರಿತ ಮತ್ತು ನಿಖರ ಪತ್ತೆ ಬಹಳ ಪ್ರಮುಖವಾಗಿದೆ ಎಂದರು.
ವೈರಸ್ ರೋಗಗಳ ನಿಯಂತ್ರಣಕ್ಕೆ ರೋಗಮುಕ್ತ ಬೀಜಗಳನ್ನು ಬಳಸುವುದು ಅತ್ಯವಶ್ಯ. ವೈರಸ್‍ಗಳ ನಿರ್ವಹಣೆಗೆ ಹಲವು ರೋಗ ನಿಯಂತ್ರಣ ವಿಧಾನಗಳಿದ್ದು, ಅವುಗಳನ್ನು ಬಳಸಬೇಕು ಎಂದು ತಿಳಿಸಿದರು.
ಬೆಳೆ ಸಂರಕ್ಷಣೆ ವಿಭಾಗದ ಎಚ್.ಎಂ. ವೆಂಕಟೇಶ ಮಾತನಾಡಿ, ಜೈವಿಕ ಮತ್ತು ಅಜೈವಿಕ ಒತ್ತಡಗಳಿಂದ ಸಸ್ಯದ ಬೆಳವಣಿಗೆ, ಉತ್ಪನ್ನದ ಗುಣಮಟ್ಟ ಹಾಗೂ ಉತ್ಪಾದನೆ ತೀವ್ರವಾಗಿ ಕುಸಿಯುತ್ತಿದ್ದು, ಇದನ್ನು ತಡೆಯಲು ಸಸ್ಯ ರೋಗ ನಿರೋಧಕ ಉತ್ತೇಜಕಗಳು ಅತ್ಯಂತ ಪರಿಣಾಮಕಾರಿ ವಿಧಾನವಾಗಿವೆ ಎಂದರು.
ಜೈವಿಕ ಉತ್ತೇಜಕಗಳು ರೋಗಕಾರಕಗಳ ವಿರುದ್ಧ ನೈಸರ್ಗಿಕ ಪ್ರತಿಕ್ರಿಯ ಉಂಟು ಮಾಡುತ್ತವೆ. ರಾಸಾಯನಿಕ ಉತ್ತೇಜಕಗಳು ಸಸ್ಯದ ಒಳಗಿನ ರಕ್ಷಣಾಜನಕಗಳನ್ನು ಸಕ್ರಿಯಗೊಳಿಸುತ್ತವೆ. ಇದರಿಂದ ಕೀಟನಾಶಕಗಳ ಬಳಕೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಎಂ. ಪ್ರಭಾಕರ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಗುಣಮಟ್ಟಕ್ಕಾಗಿ ಸಮಗ್ರ ಪೋಷಕಾಂಶಗಳ ಬಳಕೆ ಮಾಡಬೇಕು. ನೀರು, ಗೊಬ್ಬರ, ಬೀಜ ಮತ್ತು ಮಣ್ಣಿನ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಅತ್ಯವಶ್ಯಕ ಎಂದು ಹೇಳಿದರು.
ರಮೇಶ ಮೋಹಾಲೆ, ನಿಖರ ಕೃಷಿ ಶಾಸ್ತ್ರದ ಪಾತ್ರ ವಿವರಿಸಿದರು. ದಕ್ಷಿಣ ಏಶಿಯಾ ಜೈವಿಕ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥ ಭಗೀರಥ ಚೌಧರಿ, ಮೆಣಸಿನಕಾಯಿ ಉತ್ಪಾದನೆಗೆ ಸ್ಮಾರ್ಟ್ ವಿಧಾನಗಳ ಬಳಕೆ, ವಿಜ್ಞಾನಿ ಗಿರಿಧರ ಕಾಳಿದಾಸ, ಗುಂಟೂರು ಮೆಣಸಿನಕಾಯಿಯಲ್ಲಿ ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಳ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.