ಕೂಡಲಸಂಗಮ: ‘ಬಸವಣ್ಣನವರಿಗಿಂತ ಪೂರ್ವದಲ್ಲಿ ಜೈನ ಧರ್ಮೀಯರು ಬಹುಸಂಖ್ಯಾತರಾಗಿದ್ದರು. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ನಂತರ ಬಹುತೇಕ ಜೈನರು ಲಿಂಗಾಯತ ಧರ್ಮಕ್ಕೆ ಮತಾಂತರವಾದರು. ಚರಿತ್ರೆಯಲ್ಲಿ ಪರಂಪರೆಗಿಂತ ಆಧಾರಗಳು ಮುಖ್ಯ’ ಎಂದು ಸಿಂದಗಿ ಸಿ.ಎಂ.ಮನಗೂಳಿ ಪದವಿ ಕಾಲೇಜು ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.
ಲಿಂಗಾಯತ ಪಂಚಮಸಾಲಿ ಪೀಠದಿಂದ ಕೂಡಲಸಂಗಮದ ಶೇಖಪ್ಪ ದೇಶಿ ಅವರ ಮನೆಯಲ್ಲಿ ಸೋಮವಾರ ನಡೆದ ‘ಮನೆ-ಮನದಲ್ಲಿ ಕೂಡಲಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಪಂಚಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮುದಾಯದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸಮುದಾಯದ ಮುಖಂಡರು ಇಟ್ಟರು. ಪಂಚಪೀಠದವರು ಒಪ್ಪದ ಕಾರಣ ಕೂಡಲಸಂಗಮ, ಹರಿಹರದಲ್ಲಿ ಪೀಠಗಳು ಹುಟ್ಟಿಕೊಂಡವು’ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಜಯಮೃತ್ಯುಂಜಯ ಸ್ವಾಮೀಜಿ, ‘ಶ್ರಾವಣಮಾಸದ ಅಂಗವಾಗಿ 16 ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಬಸವಾದಿ ಶರಣರ ವಚನ ಚಿಂತನೆಗಳ ಉಪನ್ಯಾಸ ಇರುತ್ತಿತ್ತು. ಈ ವರ್ಷ ಪಂಚಮಸಾಲಿ ಮಹಾನ್ ನಾಯಕರ ಪರಿಚಯಿಸುವ ಕಾರ್ಯ ಆರಂಭಿಸಿದ್ದೇವೆ. ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರೇ ಪಂಚಮಸಾಲಿಗಳು’ ಎಂದರು.
ಶೇಖಪ್ಪ ದೇಶಿ ಕುಟುಂಬದವರನ್ನು ಶ್ರೀಗಳು ಸನ್ಮಾನಿಸಿದರು. ಕಲಬುರಗಿ ಪಂಚಸೇನಾ ಅಧ್ಯಕ್ಷ ಸೋಮಶೇಖರ ಮಾಳಗಿ, ಮುಖಂಡರಾದ ಎಲ್.ಎಂ. ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ, ಶೇಖರಗೌಡ ಗೌಡರ, ಗಿರೀಶಗೌಡ ಗೌಡರ, ಶರಣು ಪಾಟೀಲ, ಸಿದ್ದು ಪಾಟೀಲ, ಆದಪ್ಪ ಗೊರಚಿಕ್ಕನವರ ಇದ್ದರು.
ಪಂಚಮಸಾಲಿ ಸಮುದಾಯ ಸಂಘಟಿಸಿದ ಶ್ರೇಯಸ್ಸು ಬಸವಜಯಮೃತ್ಯುಂಜಯ ಶ್ರೀಗಳಿಗೆ ಸಲ್ಲುತ್ತದೆ. ಪಂಚಮಸಾಲಿಗಳ ಶಕ್ತಿ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಕಾರ್ಯ ಮುಂದುವರಿಸಬೇಕುಅರವಿಂದ ಮನಗೂಳಿ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.