ADVERTISEMENT

ಜಮಖಂಡಿ | ಹಿಂದೂ ಸಮಾಜ ಒಗ್ಗೂಡಲಿ: ಶ್ರೀನಿವಾಸ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:27 IST
Last Updated 12 ಅಕ್ಟೋಬರ್ 2025, 6:27 IST
ಜಮಖಂಡಿಯ ಸಮಸ್ಕಾರ ಮಂಡಳಿಯ ಮೈದಾನದಲ್ಲಿ ಶನಿವಾರ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಮಾತನಾಡಿದರು
ಜಮಖಂಡಿಯ ಸಮಸ್ಕಾರ ಮಂಡಳಿಯ ಮೈದಾನದಲ್ಲಿ ಶನಿವಾರ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಮಾತನಾಡಿದರು   

ಜಮಖಂಡಿ: ಜಾತಿ, ಸ್ವಾರ್ಥ ಭಾವನೆ ಬಿಟ್ಟು ಹಿಂದೂ ಸಮಾಜ ಸಂಘಟಿತವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ತಿಳಿಸಿದರು.

ಇಲ್ಲಿನ ಸಮಸ್ಕಾರ ಮಂಡಳಿಯ ಮೈದಾನದಲ್ಲಿ ಶನಿವಾರ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಜಿಹಾದಿ ಶಕ್ತಿಗಳು, ಕಮ್ಯುನಿಷ್ಟರು, ಜಾತಿಗಳನ್ನು ಒಡೆಯುವಂತಹ ಜಾತಿಗಣತಿಯ ನೀತಿಗಳಿಂದ ಎಚ್ಚರಿಕೆಯಿಂದ ಇರಬೇಕು. ಸಮಾಜ ಒಗ್ಗಟ್ಟಾದರೆ ಯಾರಿಂದಲೂ ಏನೂ ಮಾಡಲಾಗುವುದಿಲ್ಲ. ಒಡಕಾದರೇ ವಿಭಜನೆಯಾಗುತ್ತದೆ ಎಂಬ ಸತ್ಯವನ್ನು ಅರಿತು ಕೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬ ಸ್ವಯಂ ಸೇವಕ ತಮ್ಮ ಮನೆಗಳಿಂದ ಇಂತಹ ವಿಚಾರಗಳನ್ನು ಸತ್ಸಂಗದ ಮೂಲಕ ತಿಳಿಸಬೇಕು ಎಂದು ಹೇಳಿದರು.

ADVERTISEMENT

ನಮ್ಮಲ್ಲಿ ವೈಯಕ್ತಿಕ ಚಾರಿತ್ರ್ಯ, ದೈವ ಭಕ್ತಿ ಎಲ್ಲವು ಇದೆ. ಆದರೆ ರಾಷ್ಟ್ರಚಾರಿತ್ಯ್ರದ ಕೊರತೆ ಇದೆ. ಇದರಿಂದ ನಮ್ಮವರಿಂದಲೇ ನಮ್ಮ ಸಮಾಜಕ್ಕೆ ಹಾನಿಯಾಗಿದೆ. ಹಿಂದೂಗಳೆಲ್ಲರೂ ಒಂದೇ ಎಂಬ ಭಾವನೆ ಬರಬೇಕು ಇದೇ ಮನೋಭಾವವಿಟ್ಟುಕೊಂಡು ಸಂಘ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪಥಸಂಚಲನ; ನಮಸ್ಕಾರ ಮಂಡಳಿ ಹಾಗೂ ಕುಂಚನೂರು ರಸ್ತೆಯಿಂದ ಎರಡು ಪ್ರತ್ಯೇಕ ತಂಡಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ರಸ್ತೆಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. 8 ಘೋಷವಾದ್ಯಮೇಳಗಳು, 4800 ಜನ ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ರಸ್ತೆಯುದ್ದಕ್ಕೂ  ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಪುಟ್ಟ ಮಕ್ಕಳು ಭಾರತ ಮಾತೆಯ ವೇಷಭೂಷಣಗಳನ್ನು ಅಲಂಕಾರ ಮಾಡಿಕೊಂಡಿದ್ದರು. ಅಶೋಕ ವೃತ್ತದಲ್ಲಿ ಎರಡು ತಂಡಗಳ ಸಮಾಗಮವಾಗಿ ಅಲ್ಲಿಂದ ನಮಸ್ಕಾರ ಮಂಡಲಿಯ ಆವರಣದ ವರೆಗೆ ಪಥಸಂಚಲನ ನಡೆಯಿತು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ವೇದಿಕೆಯಲ್ಲಿ ಕಲ್ಯಾಣಮಠದ ಗೌರಿಶಂಕರ ಶ್ರೀಗಳು, ಓಲೆಮಠದ ಆನಂದದೇವರು, ರುದ್ರಾವದೂತ ಮಠದ ಕೃಷ್ಣಾನಂದ ಅವದುತರು, ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು, ಮೈಗೂರಿನ ಗುರುಪ್ರಸಾದ ಶ್ರೀಗಳು, ಕುಂಚನೂರಿನ ಸಿದ್ಧಲಿಂಗ ದೇವರು, ವಿಶ್ವನಾಥ ಶಾಸ್ರ‍್ತಿ, ಜಕನೂರಿನ ಮಾದುಲಿಂಗ ಮಹಾರಾಜರು, ವಿಜಯಪುರ ವಿಭಾಗ ಸಂಘಚಾಲಕ ವಿಜಯಕುಮಾರ ಕರಮರಕರ ಭಾಗವಹಿಸಿದ್ದರು.

ಶಿವಲಿಂಗ ಕಮತನವರ ನಿರೂಪಿಸಿದರು. ನಗರ ಕಾರ್ಯವಾಹ ಮಲ್ಲಿಕಾರ್ಜುನ ಇಂಗಳಗಾವಿ ಸ್ವಾಗತಿಸಿದರು. ನಿಂಗರಾಜ ಸಂಕರೆಡ್ಡಿ ಪರಿಚಯ ಮಾಡಿದರು. ಹರೀಶ ಪವಾರ ರಾಘವೇಂದ್ರ ಕಲ್ಲೂರ ವಯಕ್ತಿಕ ಗೀತೆ ಹಾಡಿದರು. ವಿಜಯ ಮಡಿವಾಳ ವಂದಿಸಿದರು. ನಾಗರಾಜ ಅಮೃತ ವಚನ ಹೇಳಿದರು.

ಜಮಖಂಡಿ: ಇಲ್ಲಿನ ಅಶೋಕ ವೃತ್ತದಲ್ಲಿ ಎರಡು ತಂಡಗಳ ಸಮಾಗಮವಾಗಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.