ADVERTISEMENT

‘ಮಾವಾ’ ಘಾಟಿನಲ್ಲಿ ಮುಳುಗಿರುವ ಜಮಖಂಡಿ

ಆರೋಗ್ಯದ ಮೇಲೆ ಹಾನಿ ಮಾಡುವ ಮಾವಾಕ್ಕೆ ಕಡಿವಾಣ ಯಾವಾಗ?

ಆರ್.ಎಸ್.ಹೊನಗೌಡ
Published 11 ಆಗಸ್ಟ್ 2025, 2:35 IST
Last Updated 11 ಆಗಸ್ಟ್ 2025, 2:35 IST
ಜಮಖಂಡಿಯಲ್ಲಿ ಮಾವಾ ಮಾರಾಟ ಮಾಡಲು ತಯಾರಿಸಿದ ಪ್ಯಾಕೇಟ್‌ಗಳು
ಜಮಖಂಡಿಯಲ್ಲಿ ಮಾವಾ ಮಾರಾಟ ಮಾಡಲು ತಯಾರಿಸಿದ ಪ್ಯಾಕೇಟ್‌ಗಳು   

ಜಮಖಂಡಿ: ಒಂದು ಕಾಲಕ್ಕೆ ಜಮಖಂಡಿ ಆಧ್ಯಾತ್ಮ, ಕ್ರೀಡೆ, ಸಾಹಿತ್ಯ, ರಾಜ್ಯವೈಭವ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಾಧನೆಗಳನ್ನು ಮಾಡುತ್ತಾ ರಾಜ್ಯದ ಗಮನವನ್ನು ಸೆಳೆಯುತ್ತಿತ್ತು. ಆದರೆ, ಇಂದು ಜಮಖಂಡಿ ‘ಮಾವಾ’ (ಗುಟಕಾದಂತಿರುತ್ತದೆ) ಮಾರಾಟದಿಂದ ಗುರುತಿಸಿಕೊಳ್ಳತೊಡಗಿದೆ. ಜಮಖಂಡಿಯಿಂದ ಮಹಾರಾಷ್ಟ್ರ ರಾಜ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಜಮಖಂಡಿ ಮಾವಾ’ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. 

ಜಮಖಂಡಿ ವ್ಯಾಪ್ತಿಯಲ್ಲಿ 2020ರಿಂದ 2025ರವರೆಗೆ ಅಂದಾಜು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಮಾವಾ ಉತ್ಪಾದನೆಯ ಸಂಪೂರ್ಣ ಜಾಲವನ್ನು ಭೇದಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಲವಾರು ಪ್ರಕರಣ ದಾಖಲು ಮಾಡಿ, ಬಿಟ್ಟು ಬಿಡುತ್ತಾರೆ. ಕೆಲ ದಿನಗಳ ನಂತರ ಮತ್ತೇ ಅವರು ಅದೇ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. 

35 ವರ್ಷಗಳ ಹಿಂದೆ ನಗರದ ಹನುಮಾನ ಚೌಕಿನಲ್ಲಿ ಒಬ್ಬ ಪಾನ್ ಶಾಪ್‌ ಮಾಲೀಕನು ಅಡಿಕೆ, ತಂಬಾಕು, ಸುಣ್ಣ ಮಿಶ್ರಣಮಾಡಿ ತಿಕ್ಕಿ ಕಾಗದದಲ್ಲಿ ಕಟ್ಟಿ ₹2 ರಿಂದ ₹3 ಮಾರಾಟ ಮಾಡುತ್ತಿದ್ದನು. ಅಲ್ಲಿಂದ ಪ್ರಾರಂಭವಾಗಿ ವಿವಿಧ ಪಾನ್ ಶಾಪ್‌ ಮಾರಾಟ ಮಾಡಲು ಪ್ರಾರಂಭವಾಗಿ ಪ್ರತಿದಿನಕ್ಕೆ 50 ಸಾವಿರಕ್ಕೂ ಅಧಿಕ ಮಾವಾ ಪಾಕೇಟ್‌ಗಳು ಮಾರಾಟವಾಗುತ್ತಿವೆ.

ADVERTISEMENT

ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯದ ಮಿರಜ, ಸಾಂಗಲಿ, ಮುಂಬೈ ಹಾಗೂ ಹೈದರಾಬಾದ್‌ಗಳಲ್ಲಿ ಜಮಖಂಡಿ ಮಾವಾಗೆ ಬೇಡಿಕೆ ಇದೆ. ಪ್ರತಿದಿನ 40-50 ಸಾವಿರ ಪಾಕೇಟ್ ಮಾರಾಟವಾಗುತ್ತವೆ. ದಿನಕ್ಕೆ ಅಂದಾಜು ₹15 ರಿಂದ ₹20 ಲಕ್ಷ ವಹಿವಾಟು ನಡೆಯುತ್ತಿದೆ ಎಂಬ ಅಂದಾಜಿದೆ. 

ಜಮಖಂಡಿಯ ಅವಟಿಗಲ್ಲಿ, ಮಹಾಲಿಂಗೇಶ್ವರ ಕಾಲೊನಿ, ರೆಹಮತ್ ನಗರ, ಮೊಮಿನ್ ಗಲ್ಲಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಭಾರಿ ಪ್ರಮಾಣದ ದೊಡ್ಡಜಾಲ ಬೇರೂರಿದೆ. ಲಾಭಕ್ಕಾಗಿ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವವರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ಅವಶ್ಯಕತೆ ಇದೆ.

ಜಮಖಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕವಾಗಿ ಮಾವಾ ತಯಾರಾಗುತ್ತದೆ. ಕಳಪೆ ಅಡಿಕೆ,  ಸುಣ್ಣ, ಕಳಪೆ ತಂಬಾಕು, ಬಣ್ಣದಂತಹ ನಿಕೋಟಿನ್ ನಂತಹ ಕೆಮಿಕಲ್ ಪದಾರ್ಥಗಳನ್ನು ಸೇರಿಸುತ್ತಾರೆ. ಅಡಿಕೆ ಒಡೆಯಲು ಮೆಷಿನ್‌ ಅಳವಡಿಸಲಾಗಿದೆ. ಪ್ಲಾಸ್ಟಿಕ್‌ನಲ್ಲಿ ಹಾಕಿ ಟೈರ್ ಮೇಲೆ ಹಾಕಿ ತಿಕ್ಕುತ್ತಾರೆ. ಇನ್ನೂ ಕೆಲವರು ಯಂತ್ರಗಳಲ್ಲಿ ತಯಾರಿಸುತ್ತಾರೆ.

ತಯಾರಿಸಿದ ಮಾವಾವನ್ನು ಕವರ್‌ನಲ್ಲಿ ಹಾಕಿ ಪಾನ್ ಶಾಪ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವರ ಮನೆಗಳಿಗೂ ತಲುಪಿಸಲಾಗುತ್ತದೆ. ಬಸ್ ಹಾಗೂ ಕೋರಿಯರ್ ಮೂಲಕ ಬಾಕ್ಸ್‌ಗಳಲ್ಲಿ ಕಳಿಸುತ್ತಾರೆ. ಕೆಲ ಕಡೆ ಮಾವಾ ತಯಾರಿಸುವ ಸಣ್ಣ, ಸಣ್ಣ ಕಾರ್ಖಾನೆಗಳನ್ನೇ ಆರಂಭಿಸಲಾಗಿದೆ. ಸ್ಪೇಷಲ್ ಮಾವಾಗೆ ₹60-70, ಕೈಯಿಂದ ತಿಕ್ಕಿದ ಮಾವಾಗೆ ₹40-50, ಹಾಗೂ ಟೈರ್ ಮೇಲೆ ತಿಕ್ಕಿದ ಮಾವಾಗೆ ₹30ರಂತೆ ಮಾರಾಟ ಮಾಡಲಾಗುತ್ತದೆ. ಒಂದು ಮಾವಾ ಪಾಕೇಟ್‌ನಲ್ಲಿ 5ರಿಂದ 6 ಬಾರಿ ತಿನ್ನುವಷ್ಟು ಇರುತ್ತದೆ.

ಶ್ರಮವಹಿಸಿ ದುಡಿಯುವ ಕಟ್ಟಡ ಕಾರ್ಮಿಕರು, ವಾಹನ ಚಾಲಕರು, ಕ್ಷೌರಿಕರು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಕೆಲ ಪೊಲೀಸರು, ರೈತರು ಸೇರಿದಂತೆ ಹಲವರು ಇದನ್ನು ತಿನ್ನುತ್ತಾರೆ. ಯುವ ಜನರು ಮಾವಾ ದಾಸರಾಗಿರುವುದು ವಿಪರ್ಯಾಸ.

ಬೆಳಿಗ್ಗೆ ಎದ್ದು ಮಾವಾ ಸೇವಿಸದೆ ಕೆಲವರಿಗೆ ದಿನದ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗುವುದಿಲ್ಲ. ಇನ್ನೂ ಕೆಲವರು ಮಾವಾ ಸೇವಿಸಿದರೆ ಹುಮ್ಮಸ್ಸು ಹೆಚ್ಚುತ್ತದೆ ಎಂಬ ಭ್ರಮೆಯಲ್ಲಿದ್ದರೆ, ಇನ್ನೂ ಕೆಲವರು ಹಸಿವು ತಡೆಯಲು ಜಗಿಯುತ್ತಾರೆ. ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ರಸ್ತೆಗಳು, ದೇವಸ್ಥಾನ, ಸೇರಿದಂತೆ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಉಗುಳುವುದರಿಂದ ಪರಿಸರ ಹಾಳಾಗುತ್ತಿದೆ.

ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಈಚೆಗೆ ಅಧಿಕಾರಿಗಳು ಮಾವಾ ಕಾರ್ಖಾನೆ ಮೇಲೆ ದಾಳಿ ಮಾಡಿದ್ದರು
ಜಮಖಂಡಿ ಮಾವಾ ಪಾಕೇಟ್ ಗಳು
ಮಾವಾ ಉತ್ಪಾದನೆಯನ್ನು ಸಂಪೂರ್ಣ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಹಲವಾರು ಕಡೆಗಳಲ್ಲಿ ದಾಳಿ ಮಾಡಲಾಗಿದೆ ಪ್ರಕರಣವನ್ನೂ ದಾಖಲಿಸಲಾಗಿದೆ
ಸಂಗಪ್ಪ ಜಿಲ್ಲಾಧಿಕಾರಿ
ತಂಬಾಕು ಉತ್ಪನ್ನಗಳ ಮಾರಾಟದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಮಾವಾ ತಯಾರಿ ಮಾಡುವ ಕೆಲ ಕಾರ್ಖಾನೆಗಳನ್ನು ಬಂದ್ ಮಾಡಲಾಗಿದೆ ಕದ್ದು ಮುಚ್ಚಿ ಕೆಲವರು ಮಾರಾಟ ಮಾಡುತ್ತಿದ್ದಾರೆ. ಅಂತಹವರನ್ನು ಹಿಡಿಯುವುದು ಕಷ್ಟವಾಗಿದೆ
ಡಾ.ಗೈಬೂಸಾಬ್‌ ಗಲಗಲಿ ತಾಲ್ಲೂಕು ವೈದ್ಯಾಧಿಕಾರಿ
ಮಾವಾ ಮಾರಾಟದ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇದ್ದರೂ ಬಂದ್ ಆಗುವ ವಿಶ್ವಾಸವಿಲ್ಲ. ಹಣದ ಬೆನ್ನು ಹತ್ತಿ ಅನಾರೋಗ್ಯ ಸಮಾಜ ನಿರ್ಮಾಣ ಮಾಡುತ್ತಿರುವುದು ವಿಷಾದನೀಯ
ಶಶಿಕಾಂತ ದೊಡಮನಿ ವಕೀಲ

ಆರೋಗ್ಯದ ಮೇಲೆ ಪರಿಣಾಮ

ಅಡಿಕೆ ಸುಣ್ಣ ತಂಬಾಕು ಬಣ್ಣದಂತಹ ನಿಕೋಟಿನ್ ಪದಾರ್ಥಗಳನ್ನು ಬೆರೆಸಿರುವ ಮಾವಾವನ್ನು ಜಗಿಯುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಕ್ಯಾನ್ಸರ್ ಬಾಯಿರೋಗ ಹಲ್ಲುನೋವು ಅಧಿಕ ರಕ್ತದೊತ್ತಡ ವಸಡು ಸವೆತ ಹೃದಯ ಸಂಬಂಧಿ ಕಾಯಿಲೆಗಳು ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ನರಮಂಡಲಕ್ಕೆ ಹಾನಿ ಟಿಬಿ ಹರಡುವ ಸಾಧ್ಯತೆಗಳು ಹೆಚ್ಚಿವೆ. ಮಾವಾ ತಿನ್ನುವುದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದರು.

ವಿಚಕ್ಷಣ ದಳ ರಚನೆಯಾಗಲಿ

ಜನರ ಆರೋಗ್ಯ ಹಾಳು ಮಾಡುವ ‘ಮಾವಾ’ ಮಾರಾಟ ಬಂದ್‌ ಮಾಡಲು ಸ್ಥಳೀಯ ಅಧಿಕಾರಿಗಳಿಂದ ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಆರೋಪ. ಜಿಲ್ಲಾ ಮಟ್ಟದಲ್ಲಿ ವಿಚಕ್ಷಣ ದಳ ರಚಿಸಿ ಅನಿರೀಕ್ಷಿತ ದಾಳಿ ನಡೆಸಬೇಕು. ವ್ಯಾಪಾರಿಗಳೊಂದಿಗೆ ಕೆಲವು ಅಧಿಕಾರಿಗಳೂ ಷಾಮೀಲಾಗಿದ್ದಾರೆ. ಪರಿಣಾಮ ಹಲವಾರು ವರ್ಷಗಳಿಂದ ನಿರಂತರವಾಗಿ ಮಾರಾಟ ಮಾಡಿಕೊಂಡೇ ಬಂದಿದ್ದಾರೆ. ಮಾರಾಟ ಬಂದ್ ಮಾಡಲು ಮುಂದಾದರೆ ರಾಜಕೀಯ ಒತ್ತಡವೂ ಅಡ್ಡ ಬರುತ್ತದೆ. ಜನರ ಆರೋಗ್ಯದ ದೃಷ್ಟಿಯಿಂದ ಇವನ್ನೆಲ್ಲ ಹಿಮ್ಮೆಟ್ಟಿಸಲು ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.